ಬಳ್ಳಾರಿ: ನಟ ದರ್ಶನ್ ಗೆ ಬುಧವಾರ(ಅ30) ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರಾದ ಬೆನ್ನಲ್ಲೇ ಬಳ್ಳಾರಿ ಸೆಂಟ್ರಲ್ ಜೈಲಿನತ್ತ ಅಭಿಮಾನಿಗಳು ಧಾವಿಸುತ್ತಿದ್ದು, ಪೊಲೀಸರು ಭದ್ರತೆ ಬಿಗಿ ಗೊಳಿಸುತ್ತಿದ್ದಾರೆ. ವಿವಿಧೆಡೆಯಿಂದ ಸಾವಿರಾರು ಅಭಿಮಾನಿಗಳು ಜೈಲಿನತ್ತ ತೆರಳುತ್ತಿದ್ದು ಮುಂಜಾಗೃತಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.
ಜಾಮೀನು ಮಂಜೂರಾದ ವಿಷಯ ಆರಂಭದಲ್ಲಿ ಸ್ವತಃ ದರ್ಶನ್ ನಂಬಲಿಲ್ಲ. ಮೇಲಾಧಿಕಾರಿಗಳು ಬೇಲ್ ಸಿಕ್ಕ ವಿಷಯ ತಿಳಿಸಿದ ಬಳಿಕ ದರ್ಶನ್ ರಿಲೀಫ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋರ್ಟ್ ನಿಂದ ಜಾಮೀನು ನೀಡಿದ ಆದೇಶ ಪ್ರತಿ ಮೇಲ್ ಅಥವಾ ನೇರವಾಗಿ ಜೈಲು ಅಧಿಕಾರಿಗಳಿಗೆ ಸಂಜೆ 6.30 ರ ಒಳಗೆ ತಲುಪಿದರೆ ಮಾತ್ರ ಇಂದು ಬಿಡುಗಡೆಯಾಗಲಿದ್ದಾರೆ. ಇಲ್ಲದಿದ್ದರೆ ಗುರುವಾರ ಬೆಳಗ್ಗೆ ಬಿಡುಗಡೆ ಮಾಡುವ ಸಾಧ್ಯತೆ ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದ್ದಾರೆ.
ವಿಜಯಲಕ್ಷ್ಮೀ ಜೈಲಿಗೆ ಭೇಟಿ
ಜಾಮೀನು ಮಂಜೂರುಯಾದ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಜೈಲಿಗೆ ಭೇಟಿ ನೀಡಿದ್ದಾರೆ. ಬೆಳಗ್ಗೆಯೇ ನಗರಕ್ಕೆ ಆಗಮಿಸಿ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ವಿಜಯಲಕ್ಷ್ಮೀ ಅವರೊಂದಿಗೆ ನಟ ಧನ್ವೀರ್ ಹಾಗೂ ಸಂಬಂಧಿಗಳು ಇದ್ದಾರೆ.
ಜೈಲಿನ ಸುತ್ತ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಉದ್ವೇಗದಲ್ಲಿ ಮುನ್ನುಗ್ಗುತ್ತಿದ್ದ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿ ಚದುರಿಸಲಾಗಿದೆ. ಬ್ಯಾರಿಕೇಡ್ ಗಳನ್ನೂ ಅಳವಡಿಸಿ ಗುಂಪುಗಳನ್ನು ಚದುರಿಸಲಾಗುತ್ತಿದೆ.
ದರ್ಶನ್ ಅವರಿಗೆ ಜಾಮೀನು ಸಿಕ್ಕ ಬಳಿಕ ನಟ ನಟಿಯರು ಸಂಭ್ರಮ ವ್ಯಕ್ತಪಡಿಸಿದ್ದಾರೆ.