ಮನೆ ಸುದ್ದಿ ಜಾಲ ಮೈಸೂರಿಗೆ ಪ್ರಧಾನಿ ಮೋದಿ: ಯೋಗ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ-ಸಂಸದರಲ್ಲೇ ಭಿನ್ನರಾಗ

ಮೈಸೂರಿಗೆ ಪ್ರಧಾನಿ ಮೋದಿ: ಯೋಗ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ-ಸಂಸದರಲ್ಲೇ ಭಿನ್ನರಾಗ

0

ಮೈಸೂರು (Mysuru): ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಯೋಗ ನಗರಿಗೆ ಆಗಮಿಸುತ್ತಿದ್ದಾರೆ. ಆದರೆ ಈ ಕಾರ್ಯಕ್ರಮದ ಕುರಿತು ಬಿಜೆಪಿಯ ಶಾಸಕ-ಸಂಸದರಲ್ಲೇ ಭಿನ್ನರಾಗ ಮೂಡಿದೆ.

ಜೂನ್‌ 21 ರಂದು ಪ್ರಧಾನಿ ಮೋದಿ ಆಗಮಿಸುತ್ತಿದ್ದು, ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಯೋಗ ದಿನದ ಗಿನ್ನಿಸ್ ದಾಖಲೆ ಕುರಿತು ಬಿಜೆಪಿ ನಾಯಕರಲ್ಲೇ ದ್ವಂದ್ವ ನಿಲುವು ತಾಳಿದೆ.

ಕಾರ್ಯಕ್ರಮಕ್ಕೆ 2 ಲಕ್ಷ ಯೋಗಪಟುಗಳ ಸೇರಿಸುವ ಗುರಿ ಇದೆ ಎಂದಿದ್ದ ಶಾಸಕ ಎಸ್.ಎ.ರಾಮದಾಸ್ (S.A.Ramdas) ಅವರು ಮೂಲಕ ಗಿನ್ನಿಸ್ ರೆಕಾರ್ಡ್ ಮಾಡುವ ಚಿಂತನೆಗೆ ಮುಂದಾಗಿದ್ದರು.

ಆದರೆ ಸಂಸದ ಪ್ರತಾಪ್‌ ಸಿಂಹ (Pratap simha) ಅವರು, ಗಿನ್ನಿಸ್ ರೆಕಾರ್ಡ್ ಮುಂದಿನ ವರ್ಷವೂ ಮಾಡಬಹುದು. ಗಿನ್ನೆಸ್ ರೆಕಾರ್ಡ್ ಗಾಗಿ ಯೋಗ ಮಾಡುತ್ತಿಲ್ಲ ಎಂದು ಟಾಂಗ್‌ ನೀಡಿ, ಇದು ಸಂಪೂರ್ಣ ಕೇಂದ್ರ ಸರ್ಕಾರದ ಕಾರ್ಯಕ್ರಮ. ರಾಜ್ಯ ಸರ್ಕಾರದ್ದು ಕೇವಲ ಪೋಷಕ ಪಾತ್ರ ಮಾತ್ರ ಎಂದಿದ್ದಾರೆ.

ಯೋಗ ಕಾರ್ಯಕ್ರಮ ಆಯೋಜನೆ ವಿಚಾರದಲ್ಲೂ ಮತ್ತೆ ಪ್ರತಾಪ್ ಸಿಂಹ v/s ರಾಮದಾಸ್ ಎನ್ನುವಂತಾಗಿದೆ. ಅಷ್ಟೇ ಅಲ್ಲದೆ, ಯೋಗ ದಿನದ ಕುರಿತ ಸಭೆಗಳಿಂದಲೂ ಶಾಸಕ ರಾಮದಾಸ್ ಅಂತರ ಕಾಯ್ದುಕೊಂಡಿದ್ದಾರೆ.

ಕಾರ್ಯಕ್ರಮದಿಂದ ದೂರ ಸರಿದ ಬಿಜೆಪಿಯೇತರ ಶಾಸಕರು:

ಯೋಗ ಕಾರ್ಯಕ್ರಮದಿಂದ ಬಿಜೆಪಿಯೇತರ ಶಾಸಕರುಗಳು ದೂರ ಸರಿದಿದ್ದಾರೆ. ಇದರಿಂದ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯಕ್ರಮ ಮಾಡಬೇಕಿರುವ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಅವರ ಮೇಲಿದೆ.

ಪೂರ್ವಭಾವಿ ಸಭೆಗೂ ಬಿಜೆಪಿಯೇತರ ಶಾಸಕರು ಗೈರಾಗಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರುಗಳನ್ನು ಆಹ್ವಾನಿಸಲು ಸೋಮಶೇಖರ್‌ ಅವರು ಮುಂದಾಗುವ ಸಾಧ್ಯತೆ ಇದೆ. ಮುಂದಿನ ವಾರ ಎಲ್ಲ ನಾಯಕರುಗಳನ್ನು ಎಸ್‌ ಟಿಎಸ್‌ ಭೇಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಭರದಿಂದ ಸಾಗಿದ ಸಿದ್ಧತೆ:

ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಮೈಸೂರಿನ ರಸ್ತೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತಿದೆ. ಡೋಝರ್ , ಜೆಸಿಬಿಗಳ ಮೂಲಕ ರಸ್ತೆ ಬದಿ ಕಸವನ್ನು ತೆರವುಗೊಳಿಸಲಾಗುತ್ತಿದೆ.

ಮಂಡಕಳ್ಳಿ ಏರ್ಪೋರ್ಟ್ ನಿಂದ ರಸ್ತೆ ಮಾರ್ಗವಾಗಿ ಅರಮನೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಮೈಸೂರು- ನಂಜನಗೂಡು ರಸ್ತೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ. ರಸ್ತೆ ಬದಿ ವ್ಯಾಪಾರಿಗಳು ಅಂಗಡಿ-ಮುಂಗಟ್ಟುಗಳನ್ನು ಪಾಲಿಕೆ ತೆರವುಗೊಳಿಸುತ್ತಿದೆ.

ಸ್ವಚ್ಚ ನಗರಿಗೆ ಕಳಂಕ ಬಾರದಂತೆ ಪ್ರಧಾನಿಯ ಪ್ರಶಂಸೆಗೆ ಪಾತ್ರರಾಗಲು ನಗರಪಾಲಿಕೆ ಹಾಗೂ ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದ್ದು, ಎಡೆಬಿಡದೆ ಕೆಲಸ ಮಾಡುತ್ತಿದೆ.