ಮನೆ ರಾಜ್ಯ ಡಿಜೆ ಹಳ್ಳಿ, ಕೆಜೆ ಹಳ್ಳಿ ಕೇಸ್ ಹಿಂಪಡೆಯಲು ಸರ್ಕಾರ ಸಿದ್ಧತೆ: ಪ್ರಲ್ಹಾದ್​ ಜೋಶಿ

ಡಿಜೆ ಹಳ್ಳಿ, ಕೆಜೆ ಹಳ್ಳಿ ಕೇಸ್ ಹಿಂಪಡೆಯಲು ಸರ್ಕಾರ ಸಿದ್ಧತೆ: ಪ್ರಲ್ಹಾದ್​ ಜೋಶಿ

0

ಸಂಡೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲೂ ಗಲಭೆ ಕೋರರ ಮೇಲಿನ ಕೇಸ್ ಹಿಂಪಡೆಯಲು ಸಿದ್ಧತೆ ನಡೆಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

Join Our Whatsapp Group

ಸಂಡೂರು ವಿಧಾನಸಭಾ ಕ್ಷೇತ್ರದ ತೋರಣಗಲ್ ​ನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಮುಸ್ಲಿಂ ತುಷ್ಟೀಕರಣದ ರಾಜಕರಣ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಹಳೇ ಹುಬ್ಬಳ್ಳಿ ಗಳಭೆಕೋರರ ಮೇಲಿನ ಕೇಸ್ ರದ್ದುಪಡಿಸಿತು. ಇದೀಗ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲೂ ಮುಸ್ಲಿಮರ ಮೇಲಿನ ಕೇಸ್ ಹಿಂಪಡೆಯಲು ತಯಾರಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ ಹಿಂಪಡೆಯಲು ಎಲ್ಲಾ ತಯಾರಿ ನಡೆಸಿರುವ ಬಗ್ಗೆ ತಮಗೆ ಪಕ್ಕಾ ಮಾಹಿತಿ ಬಂದಿದೆ. ತನ್ನದೇ ಪಕ್ಷದ ಒಬ್ಬ ದಲಿತ ಶಾಸಕನ ಮನೆ ಸುಟ್ಟು ಹಾಕಿದ್ದಾರೂ ಕಾಂಗ್ರೆಸ್​ಗೆ ತುಷ್ಟೀಕರಣ ರಾಜಕಾರಣವೇ ಪ್ರಮುಖವಾಗಿದೆ. ಹಿಂದೂ ಸಂಘಟನೆ, ಹಿಂದೂಗಳು ಮತ್ತು ದೇವಸ್ಥಾನಗಳ ಮೇಲೆ ದಾಳಿ ನಡೆದರೂ ಕಾಂಗ್ರೆಸ್ ಸರ್ಕಾರ ಹಿಂದೂಯೇತರ ಆರೋಪಿಗಳನ್ನೇ ರಕ್ಷಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ಸಿಗರು ಮಹಾರಾಷ್ಟ್ರದಲ್ಲಿ ಖಾಲಿ ಹಾಳೆಯ ಸಂವಿಧಾನ ಪ್ರತಿ ಹಂಚಿದ್ದು, ಬುದ್ಧಿ ಭ್ರಮಣೆ ಆಗಿದೆಯೇ? ಇವರಿಗೆ ಎಂದು ಲೇವಡಿ ಮಾಡಿದರು. ಮಾತೆತ್ತಿದರೆ ಸಂವಿಧಾನ, ದಲಿತರ ಪರ ಎನ್ನುವ ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ, ದಲಿತರಿಗೆ ಕೊಡುವ ಗೌರವ ಇದೇನಾ ಎಂದು ಪ್ರಶ್ನಿಸಿದ್ದಾರೆ.

ನಾಗ್ಪುರದಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಇದ್ದ ಕಾರ್ಯಕ್ರಮದಲ್ಲಿ ಮೊದಲ ಪುಟ ಸಂವಿಧಾನ ಗ್ರಂಥದ ಚಿತ್ರ, ಒಳಗೆಲ್ಲ ಖಾಲಿ ಪುಟಗಳಿರುವ ಪ್ರತಿಗಳನ್ನು ಹಂಚಿದೆ. ಇದು ಸಂವಿಧಾನದ ಮೇಲೆ ಹಾಗೂ ಅಂಬೇಡ್ಕರ್, ದಲಿತರ ಮೇಲೆ ಕಾಂಗ್ರೆಸ್ಸಿಗರಿಗೆ ಇರುವ ಭಾವನೆ, ಕಿಮ್ಮತ್ತು ಎಂಥದ್ದು ಎಂಬುದನ್ನು ತೋರಿಸುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.