ಬೆಂಗಳೂರು: ಅಪರಾಧದಲ್ಲಿ ಭಾಗಿಯಾಗಿರುವ ಪತಿಯೊಂದಿಗೆ ನೆಲೆಸಿದ್ದಾಳೆಂಬ ಮಾತ್ರಕ್ಕೆ ಪತ್ನಿಯನ್ನು ಪ್ರಕರಣದಲ್ಲಿ ಸಹ ಆರೋಪಿಯನ್ನಾಗಿ ಮಾಡಲಾಗದು ಎಂದು ಹೈಕೋರ್ಟ್ ಹೇಳಿದೆ.
ಕರ್ನಾಟಕ ಅಬಕಾರಿ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಗಳಿಗಾಗಿ ಪತಿ ನಾರ್ಬರ್ಟ್ ಡಿ’ಸೋಜಾ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಶಾಂತಿ ರೋಚ್ ಅವರನ್ನು ಸಹ ಆರೋಪಿಯನ್ನಾಗಿ ಸೇರಿಸಬೇಕೆಂದು ಕೋರಿ ಪ್ರಕರಣದ ದೂರುದಾರ ಆರ್.ಕೆ. ಭಟ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಈ ವಿಚಾರವಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯ ಹೊರಡಿಸಿದ ಆದೇಶ ಪ್ರಶ್ನಿಸಿ ತುಮಕೂರಿನ ಕುವೆಂಪು ನಗರ ನಿವಾಸಿ ಆರ್.ಕೆ. ಭಟ್ ಸಲ್ಲಿಸಿದರು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಆರೋಪಿಯಾದ ನಾರ್ಬರ್ಟ್ ಜತೆ ಪತ್ನಿ ಶಾಂತಿ ರೋಚ್ ಒಂದೇ ಮನೆಯಲ್ಲಿ ನೆಲೆಸಿದ್ದರು.
ಪತ್ನಿಯೂ ಪತಿಯ ಅಕ್ರಮ ಮದ್ಯ ತಯಾರಿಕೆ ಹಾಗೂ ಮಾರಾಟದಲ್ಲಿ ಸಾಥ್ ನೀಡಿದ್ದಳು. ಆಕೆಯೂ ಆ ಬಗ್ಗೆ ಸ್ವಲ್ಪ ಪ್ರಮಾಣದ ಜ್ಞಾನವನ್ನು ಹೊಂದಿದ್ದಳು. ಹೀಗಾಗಿ ಪ್ರಕರಣದಲ್ಲಿ ಆಕೆಯನ್ನು ಸಹ ಆರೋಪಿ ಎಂದು ಪರಿಗಣಿಸಿ ವಿಚಾರಣೆ ಗೊಳಪಡಿಸಬೇಕು ಎಂದು ಮನವಿ ಮಾಡಿದರು. ಸರಕಾರದ ಪರ ವಾದ ಮಂಡಿಸಿದ ವಕೀಲರು ಪತಿಯ ಈ ವಹಿವಾಟು ನಿಸ್ಸಂದೇಹವಾಗಿ ಪತ್ನಿಯೂ ಬಲ್ಲವಳಾಗಿರುತ್ತಾಳೆ. ಈ ನಿಟ್ಟಿನಲ್ಲಿ ಆಕೆಯನ್ನು ಸಹ ಆರೋಪಿ ಎಂದು ಪರಿಗಣನೆ ಮಾಡಬಹುದು ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಪ್ರಕರಣ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿರದ ಹೊರತಾಗಿ ಅಪರಾಧದಲ್ಲಿ ಭಾಗಿಯಾಗಿರುವ ಪತಿಯೊಂದಿಗೆ ನೆಲೆಸಿರುವುದ್ದಕ್ಕಾಗಿ ಪತ್ನಿಯನ್ನು ಸಹ ಆರೋಪಿಯನ್ನಾಗಿ ಮಾಡಲಾಗುವುದಿಲ್ಲ. ಅಲ್ಲದೆ ಸಿಆರ್ಪಿಸಿ ಸೆಕ್ಷನ್ 319ರ ಅಡಿಯಲ್ಲಿ ವಿಚಾರಣೆಯ ಪೂರ್ವ ಹಂತದಲ್ಲಿ ಪ್ರಕರಣ ಕುರಿತಾಗಿ ಇನ್ನೋರ್ವ ಆರೋಪಿಯನ್ನು ಕರೆತಲಾಗುವುದಿಲ್ಲ.
ಚಾರ್ಜ್ ಶೀಟ್ ಸಲ್ಲಿಕೆ ಅನಂತರ ಸೂಕ್ತ ಪುರಾವೆ ಲಭ್ಯವಾದಲ್ಲಿ ಮಾತ್ರ ಸಮನ್ಸ್ ಜಾರಿಗೊಳಿಸಬಹುದಾಗಿದೆ. ಹೀಗಾಗಿ ಸುಖಾಸುಮ್ಮನೆ ಪತ್ನಿಯನ್ನು ಅಪರಾಧ ಜಾಲದೊಳಗೆ ಸಿಲುಕಿಸಲಾಗದು. ಈ ವಿಚಾರ ಸರಿಯಾಗಿ ಅರ್ಥೈಸಿಕೊಳ್ಳದೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ ಪ್ರಕರಣದಲ್ಲಿ ನ್ಯಾಯಪೀಠ ಮಧ್ಯ ಪ್ರವೇಶಿಸಲಾಗದು ಎಂದು ಹೇಳಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಏನಿದು ಪ್ರಕರಣ ?
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಿವಾಸಿ ನಾರ್ಬರ್ಟ್ ಎಂಬಾತ ತನ್ನ ಹಿತ್ತಲಿನಲ್ಲಿ ನಕಲಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದ. ಪೊಲೀಸರು ಆತನ ವಿರುದ್ಧ ಅಬಕಾರಿ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದರು. ಅರ್ಜಿದಾರರು ಆರೋಪಿ ನಾರ್ಬರ್ಟ್ ಪತ್ನಿ ಶಾಂತಿ ರೋಚ್ ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಆಕೆಯ ವಿರುದ್ಧವೂ ಸಮನ್ಸ್ ಜಾರಿಗೊಳಿಸಿ ಪ್ರಕರಣದಲ್ಲಿ ಸಹ ಆರೋಪಿಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.














