ಮೈಸೂರು (Mysuru): ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಜೂನ್ 3 ರಂದು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಜೂ.3 ರಂದು ಬೆಳಿಗ್ಗೆ 7.30ಕ್ಕೆ ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಬೈಸಿಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಮೈಸೂರು ಜಿಲ್ಲಾ ನೆಹರು ಯುವ ಕೇಂದ್ರದ ವತಿಯಿಂದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾ ನೆಹರು ಯುವ ಕೇಂದ್ರ, ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸೈಕ್ಲಿಂಗ್ ಮೈಸೂರು ತರಬೇತಿ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಇವರುಗಳ ಸಹಯೋಗದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಸೈಕಲ್ ಜಾಥಾ ಆರಂಭಗೊಂಡು ರಾಮಸ್ವಾಮಿ ವೃತ್ತ, ಮಹಾರಾಜ ಗ್ರೌಂಡ್ ವೃತ್ತ – ಜಿಲ್ಲಾಧಿಕಾರಿಗಳ ಕಛೇರಿ ರಸ್ತೆ- ಹುಣಸೂರು ರಸ್ತೆ ಮೆಟ್ರೋಪೋಲ್- ರೈಲು ನಿಲ್ದಾಣ ವೃತ್ತ- ಕೆ.ಆರ್ .ಆಸ್ಪತ್ರೆ ರಸ್ತೆ- ಪ್ರಧಾನ ಅಂಚೆ ಕಛೇರಿ ವೃತ್ತ- ಅಶೋಕ ರಸ್ತೆ ಮೂಲಕ ಮತ್ತೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೊನೆಗೊಳ್ಳಲಿದೆ. ಸೈಕಲ್ ರೈಡರ್‍ಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲಾಧಿಕಾರಿಗಳಾದ ಡಾ .ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತರಾದ ಡಾ .ಚಂದ್ರಗುಪ್ತ, ಅಪರ ಜಿಲ್ಲಾಧಿಕಾರಿಗಳಾದ ಮಂಜನಾಥಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಹೆಚ್ ಪ್ರಸಾದ್, ಅರಮನೆ ಮಂಡಳಿಯ ಉಪ ನಿರ್ದೇಶಕರಾದ ಟಿ.ಎಸ್.ಸುಬ್ರಹ್ಮಣ್ಯ ಮತ್ತಿತರರು ಭಾಗವಹಿಸಲಿದ್ದಾರೆ.