ನವದೆಹಲಿ: ದಕ್ಷಿಣ ದೆಹಲಿಯ ಸಮ್ಮರ್ ಫೀಲ್ಡ್ಸ್ ಶಾಲೆಗೆ ಗುರುವಾರ ಮಧ್ಯರಾತ್ರಿ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ.
ಶುಕ್ರವಾರ ಶಾಲೆಗೆ ಬಂದ ಶಾಲಾ ಆಡಳಿತ ಮಂಡಳಿ ಮೇಲ್ ಅನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಆದರೆ ಎಲ್ಲೂ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ
ಇದಾದ ಬಳಿಕ ಇದೊಂದು ಸುಳ್ಳು ಬೆದರಿಕೆ ಎಂಬುದು ತನಿಖೆ ನಡಿಸಿದ ಪೊಲೀಸರಿಂದ ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲದೆ ಬೆದರಿಕೆ ಇಮೇಲ್ ಕಳುಹಿಸಿದ ವ್ಯಕ್ತಿ ಬೇರೆ ಯಾರೂ ಅಲ್ಲ ಇದೆ ಶಾಲೆಯಲ್ಲಿ ಕಲಿಯುತ್ತಿರುವ ಹದಿನಾಲ್ಕು ವರ್ಷದ ಬಾಲಕ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬಾಲಕನನ್ನು ತನಿಖೆಗೆ ಒಳಪಡಿಸಿದ ವೇಳೆ ತನಗೆ ಶಾಲೆಗೆ ಹೋಗಲು ಮನಸ್ಸಿರಲಿಲ್ಲ ಹಾಗಾಗಿ ಏನು ಮಾಡುವುದು ಎಂದು ಆಲೋಚನೆ ಮಾಡುವಾಗ ಬಾಂಬ್ ಬೆದರಿಕೆ ಹಾಕಿದರೆ ಎಂದು ಆಲೋಚಿಸಿ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್ ಕಳುಹಿಸಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಯಾರಿಗೂ ಅನುಮಾನ ಬರಬಾರದೆಂದು ತನ್ನ ಶಾಲೆಯ ಜೊತೆಗೆ ಇತರ ಎರಡು ಶಾಲೆಗಳ ಹೆಸರನ್ನು ಮೇಲ್‌ನಲ್ಲಿ ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.