ಮನೆ ಸುದ್ದಿ ಜಾಲ ಅ.16 ರಿಂದ ಶ್ರೀರಂಗಪಟ್ಟಣ ದಸರಾ: ಎನ್.ಚಲುವರಾಯಸ್ವಾಮಿ

ಅ.16 ರಿಂದ ಶ್ರೀರಂಗಪಟ್ಟಣ ದಸರಾ: ಎನ್.ಚಲುವರಾಯಸ್ವಾಮಿ

0

Join Our Whatsapp Group

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಶ್ರೀರಂಗಪಟ್ಟಣ ನಾಡಹಬ್ಬ ದಸರಾ ಮಹೋತ್ಸವವನ್ನು ಅಕ್ಟೋಬರ್ 16 ರಿಂದ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಸರಾ ಮಹೋತ್ಸವ ಅಚ್ಚುಕಟ್ಟಾಗಿ, ಪಾರಂಪರಿಕವಾಗಿ,ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.

ಅಧಿಕಾರಿಗಳು ಪೂರ್ವಭಾವಿಯಾಗಿ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಜಿಲ್ಲೆಯ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಕಾರ್ಯಕ್ರಮ ಆಯೋಜಿಸಿ ಎಂದರು.

ಕಿರಂಗೂರು ಬನ್ನಿಮಂಟಪ, ಜಂಬೂ ಸವಾರಿ ಸಾಗುವ ರಸ್ತೆ, ಕಾರ್ಯಕ್ರಮ ನಡೆಯುವ ವೇದಿಕೆ ಸ್ಥಳಗಳನ್ನು ಪರಿಶೀಲನೆ ನಡೆಸಿ ದುರಸ್ತಿ ಕೆಲಸಗಳಿದ್ದಲ್ಲಿ ಪ್ರಾರಂಭಿಸಿ ಬೇಗನೆ ಪೂರ್ಣಗೊಳಿಸಿ ಎಂದರು.

ದೀಪಾಲಂಕಾರ ‌ಶ್ರೀರಂಗಪಟ್ಟಣ ದಸರಾ ನಡೆಯುವ ದಿನಗಳಲ್ಲಿ  ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಕರ್ಷಣೀಯ ದೀಪಾಲಂಕಾರವನ್ನು ನಗರ ಸ್ಥಳೀಯ ಸಂಸ್ಥೆ ಅವರು ಆಯೋಜಿಸಿ ದಸರೆಗೆ ವಿಶೇಷ ಮೆರಗು ನೀಡುವಂತೆ ತಿಳಿಸಿದರು.

ಮೆರವಣಿಗೆಯಲ್ಲಿ ಪೊಲೀಸ್ ಬ್ಯಾಂಡ್ ಮತ್ತು ಅಶ್ವಪಡೆ ಭಾಗವಹಿಸಲು ವ್ಯವಸ್ಥೆ ಮಾಡಿಕೊಡುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುವಂತೆ ತಿಳಿಸಿದರು.

ಸಭೆಯಲ್ಲಿ ದಸರಾ ಮಹೋತ್ಸವ ಮೂರು‌ ದಿನ ಅಥವಾ 5 ದಿನ ಆಯೋಜನೆಯ ಬಗ್ಗೆ ಚರ್ಚಿಸಲಾಯಿತು.

5 ದಿನ ಮಹೋತ್ಸವ ಆಯೋಜಿಸಿ: ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು 5 ದಿನಗಳ ಕಾಲ ಆಯೋಜಿನೆ ಮಾಡುವುದರಿಂದ ರೈತ, ಮಹಿಳಾ, ಮಕ್ಕಳ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬಹುದು‌ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ ಬಾಬು ಬಂಡೀಸಿದ್ದೇಗೌಡ ಅವರು ತಿಳಿಸಿದರು.ಮುಖ್ಯಮಂತ್ರಿಗಳಿಗೆ ಈ ಬಾರಿ ಹೆಚ್ಚಿನ‌ ಅನುದಾನ ನೀಡುವಂತೆ ಮನವಿ ಮಾಡಲಾಗಿದ್ದು,ಕೃಷಿ ಸಚಿವರು‌‌ ಸಹ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವಂತೆ ಕೋರಿದರು.

ವಿವಿಧ ಸಮಿತಿ ರಚನೆ: ದಸರಾ ಮಹೋತ್ಸವ ಆಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿಧಾನಸಭಾ ಹಾಗೂ ವಿಧಾನಪರಿಷತ್ ಶಾಸಕರನ್ನೊಳಗೊಂಡ ಸಂಪೂರ್ಣ ದಸರಾ ಆಚರಣಾ ಸಮಿತಿ, ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಮೆರವಣಿಗೆ, ವಸ್ತು ಪ್ರದರ್ಶನ, ಆರೋಗ್ಯ, ನಗರ ಅಲಂಕಾರ, ಕ್ರೀಡಾ, ಆಹಾರ ಹಾಗೂ ಹಣಕಾಸು ಸಮಿತಿ ರಚಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು. ಸಭೆಯಲ್ಲಿ ಶಾಸಕರಾದ ಪಿ.ರವಿಕುಮಾರ್,ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಶಾಸಕ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಅರಣ್ಯಾಧಿಕಾರಿ ರುದ್ರನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು