ಆನೇಕಲ್ (ಬೆಂಗಳೂರು): ಆನೇಕಲ್ ತಾಲೂಕಿನ ಜಿಗಣಿ – ಹಾರೋಹಳ್ಳಿ ಮುಖ್ಯರಸ್ತೆಯ ಉರಗನದೊಡ್ಡಿ ಬಳಿ ರಸ್ತೆ ದಾಟುತ್ತಿದ್ದ ಆನೆ ಮರಿಗೆ ಬೃಹತ್ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಪರಿಣಾಮ ಆನೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಕಾಡಿನ ನಡುವಿನ ರಸ್ತೆಯಲ್ಲಿ ‘ವನ್ಯ ಜೀವಿಗಳಿವೆ ನಿಧಾನವಾಗಿ ಚಲಿಸಿ’ ಎಂದು ಸೂಚನಾಫಲಕ ಹಾಕಿದ್ದರೂ ವೇಗವಾಗಿ ಚಲಿಸುವ ವಾಹನಗಳ ಭರಾಟೆಗೆ ವನ್ಯಜೀವಿಯೊಂದು ಸಾವನ್ನಪ್ಪಿದೆ.
ವೇಗದಲ್ಲಿ ಬಂದು ಡಿಕ್ಕಿ ಹೊಡೆದ ವಾಹನದ ರಭಸಕ್ಕೆ ಮರಿಯಾನೆ ರಸ್ತೆಯ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದು ಸತ್ತಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು, ಆನೇಕಲ್ ಅರಣ್ಯಾಧಿಕಾರಿಗಳೊಂದಿಗೆ ವನ್ಯಜೀವಿ ಸಂರಕ್ಷಾಣಾಧಿಕಾರಿಗಳು ಧಾವಿಸಿದ್ದಾರೆ. ರಾಮನಗರ ಜಿಲ್ಲೆ ಹಾರೋಹಳ್ಳಿ ವ್ಯಾಪ್ತಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.