ಮನೆ ಕಾನೂನು ʼಟಿಪ್ಪು ನಿಜ ಕನಸುಗಳುʼ ಪುಸ್ತಕ ಮಾರಾಟ, ಹಂಚಿಕೆ ಮಾಡದಂತೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದ ಬೆಂಗಳೂರು ನ್ಯಾಯಾಲಯ

ʼಟಿಪ್ಪು ನಿಜ ಕನಸುಗಳುʼ ಪುಸ್ತಕ ಮಾರಾಟ, ಹಂಚಿಕೆ ಮಾಡದಂತೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದ ಬೆಂಗಳೂರು ನ್ಯಾಯಾಲಯ

0

ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ರಚಿಸಿರುವ ʼಟಿಪ್ಪು ನಿಜ ಕನಸುಗಳುʼ ಪುಸ್ತಕವನ್ನು ಆನ್’ಲೈನ್’ನಲ್ಲಿ ಸೇರಿದಂತೆ ಎಲ್ಲಿಯೂ ಮಾರಾಟ ಮತ್ತು ಹಂಚಿಕೆ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಸೋಮವಾರ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.

ಬೆಂಗಳೂರು ನಿವಾಸಿಯಾದ ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ರಫೀಉಲ್ಲಾ ಬಿ ಎಸ್ ಎಂಬವರು ಸಲ್ಲಿಸಿದ್ದ ಅಸಲು ದಾವೆ ವಿಚಾರಣೆ ನಡೆಸಿದ 15ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಜೆ ಆರ್ ಮೆಂಡೋನ್ಸಾ ಅವರ ನೇತೃತ್ವದ ಪೀಠವು ಆದೇಶ ಮಾಡಿದೆ. ಕೃತಿಕಾರ ಅಡ್ಡಂಡ ಕಾರ್ಯಪ್ಪ, ಪುಸ್ತಕ ಪ್ರಕಟಿಸಿರುವ ಅಯೋಧ್ಯಾ ಪ್ರಕಾಶನ, ಪುಸ್ತಕ ಮುದ್ರಿಸಿರುವ ರಾಷ್ಟ್ರೋತ್ಥಾನ ಮುದ್ರಣಾಲಯವನ್ನು ಪುಸ್ತಕ ಹಂಚಿಕೆ ಮತ್ತು ಮಾರಾಟ ಮಾಡದಂತೆ ನ್ಯಾಯಾಲಯವು ನಿರ್ಬಂಧಿಸಿದೆ.

“ನಾಟಕದಲ್ಲಿ ವ್ಯಕ್ತಪಡಿಸಿರುವ ವಿಚಾರಗಳು ತಪ್ಪಾಗಿದ್ದು, ಟಿಪ್ಪು ಸುಲ್ತಾನ್ ಬಗ್ಗೆ ತಪ್ಪು ಮಾಹಿತಿಯನ್ನು ಪುಸ್ತಕ ಒಳಗೊಂಡಿದೆ. ಇದನ್ನು ಹಂಚಿಕೆ ಮಾಡಿದರೆ, ಫಿರ್ಯಾದಿಗೆ ಸರಿಪಡಿಸಲಾರದ ನಷ್ಟ ಉಂಟು ಮಾಡಲಿದೆ. ಅಲ್ಲದೇ, ಪುಸ್ತಕವು ಕೋಮು ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದ್ದು, ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಅಪಾಯವಿದೆ. ಪ್ರತಿವಾದಿಗಳು ನ್ಯಾಯಾಲಯದ ಮುಂದೆ ಹಾಜರಾಗಲು ಬಾಕಿ ಇರುವಾಗ ಒಂದೊಮ್ಮೆ ಪುಸ್ತಕ ಹಂಚಿಕೆ ಮಾಡಿದರೆ ಅರ್ಜಿಯ ಉದ್ದೇಶ ಸೋಲಲಿದೆ. ಸಾಮಾನ್ಯವಾಗಿ ವಿವಾದ ಸೃಷ್ಟಿಸಿದ ಪುಸ್ತಕಗಳು ಬಹುಬೇಗ ಮಾರಾಟವಾಗುತ್ತವೆ. ಹೀಗಾಗಿ, ಈ ಹಂತದಲ್ಲಿ ಪ್ರಯೋಜನದ ಸಮತೋಲನವು ಫಿರ್ಯಾದಿಗಳ ಪರವಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಇಡೀ ಪುಸ್ತಕ ತಪ್ಪಿನಿಂದ ಕೂಡಿದ್ದು, ಇತಿಹಾಸದ ಬೆಂಬಲ ಅಥವಾ ಸಮರ್ಥನೆ ಇಲ್ಲ. ಕೃತಿಕಾರರು ಎಲ್ಲಿಂದ ಮಾಹಿತಿ ಪಡೆದಿದ್ದಾರೆ ಎಂಬುದು ಪುಸ್ತಕದಲ್ಲಿ ಉಲ್ಲೇಖಿಸಲಾಗಿಲ್ಲ. ಇತಿಹಾಸವನ್ನು ಸರಿಯಾಗಿ ಅರಿಯದೇ, ವಾಸ್ತವಿಕ ವಿಚಾರಗಳನ್ನು ಸ್ವಯಂ ವ್ಯಾಖ್ಯಾನ ಮಾಡುವ ಮೂಲಕ ಪುಸ್ತಕ ಪ್ರಕಾಶನ ಮಾಡಲಾಗಿದೆ. ಮಾನಹಾನಿಕಾರಿಯಾದ ಪದ ಮತ್ತು ಅಭಿವ್ಯಕ್ತಿಯನ್ನು ಪುಸ್ತಕ ಒಳಗೊಂಡಿದ್ದು, ಇದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಕೃತಿಕಾರರು ಮತ್ತು ನಾಟಕಕ್ಕೆ ಮುನ್ನುಡಿ ಬರೆದಿರುವ ಲೇಖಕರು, ಮುನ್ನುಡಿಯಲ್ಲಿ ನಾಟಕವು ಸತ್ಯ ಸಂಗತಿಗಳು ಹಾಗೂ ಕರಾರುವಾಕ್ ಇತಿಹಾಸವನ್ನು ಆಧರಿಸಿದೆ. ಸಂಶೋಧನೆಯನ್ನು ಆಧರಿಸಿ ನಾಟಕ ರಚಿಸಲಾಗಿದ್ದು, ಟಿಪ್ಪು ಸುಲ್ತಾನ್ ಬಗ್ಗೆ ಸತ್ಯ ಸಂಗತಿಯನ್ನು ಬಯಲು ಮಾಡಲು ಪುಸ್ತಕ ಪ್ರಕಟಿಸಲಾಗಿದೆ ಎಂದು ಹೇಳಲಾಗಿದೆ ಎಂದು ಅರ್ಜಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ, ಪುಸ್ತಕ ಮಾರಾಟ ಮತ್ತು ಮೈಸೂರಿನಲ್ಲಿ ನಾಟಕ ಪ್ರದರ್ಶನವನ್ನು ತಾತ್ಕಾಲಿಕವಾಗಿ ಪ್ರತಿಬಂಧಿಸಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು.

ನಾಟಕ ಪ್ರದರ್ಶನವು ತಡೆ ನೀಡಲು ನಿರಾಕರಿಸಿರುವ ನ್ಯಾಯಾಲಯವು “ಈ ನ್ಯಾಯಾಲಯದ ವ್ಯಾಪ್ತಿಯಲ್ಲಿ ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂಬ ಆತಂಕವಿಲ್ಲ. ಹೀಗಾಗಿ, ಏಕಪಕ್ಷೀಯವಾಗಿ ನಾಟಕ ಪ್ರದರ್ಶನಕ್ಕೆ ಪ್ರತಿಬಂಧಕಾದೇಶ ಮಾಡಲಾಗದು” ಎಂದು ಆದೇಶದಲ್ಲಿ ಹೇಳಿದೆ.

ಹಿಂದಿನ ಲೇಖನಮಾದಕ ವ್ಯಸನಿ ಮಗನಿಂದಲೇ ಕುಟುಂಬದ ನಾಲ್ವರ ಹತ್ಯೆ
ಮುಂದಿನ ಲೇಖನಮೈಸೂರು: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ-ಅಪರಾಧಿಗೆ 43 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್