ಸತ್ಯಾಸತ್ಯತೆಯ ಕುರಿತು ದಿ ಕೇರಳ ಸ್ಟೋರಿ ಸಿಕ್ಕಾಪಟ್ಟೆ ವಿರೋಧ ಎದುರಿಸಿದ ನಂತರ ಟ್ರೈಲರ್’ನಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ದಿ ಕೇರಳ ಸ್ಟೋರಿ ಟ್ರೈಲರ್ ಬಿಡುಗಡೆಯಾಗ್ತಿದ್ದಂತೆ ಅದರಲ್ಲಿ ಎಲ್ಲವನ್ನೂ ಉತ್ಪ್ರೇಕ್ಷೆ ಮಾಡಲಾಗಿದೆ ಎಂದು ವಿರೋಧ ವ್ಯಕ್ತವಾಗಿತ್ತು.
32 ಸಾವಿರ ಯುವತಿಯರು ಇಸ್ಲಾಂಗೆ ಮತಾಂತರವಾಗಿಲ್ಲ. ಇದು ಸುಳ್ಳು ಎಂದು ಬಹಳಷ್ಟು ಜನರು ಸಿನಿಮಾದ ಟ್ರೈಲರ್ ನೋಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ 32 ಸಾವಿರ ಯುವತಿಯರ ನಿಜ ಕಥೆ ಎಂದು ಟ್ರೈಲರ್’ನಲ್ಲಿ ಹೇಳಲಾಗಿತ್ತು.
ನಿರ್ದೇಶಕ ಸುದಿಪ್ಟೋ ಸೆನ್ ಹಾಗೂ ಕ್ರಿಯೇಟಿವ್ ಡೈರೆಕ್ಟರ್, ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರು ಸಿನಿಮಾದಲ್ಲಿ ಸುಳ್ಳು ಸುಳ್ಳೇ ಮಾಹಿತಿ ಕೊಟ್ಟಿದ್ದಾರೆ ಎಂದು ಸಂಸದ ಶಶಿ ತರೂರ್ ಸೇರಿದಂತೆ ಬಹಳಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದ ಮೇಲೆ ಈ ಬದಲಾವಣೆ ಬಂದಿದೆ.
ಈಗ ಹೊಸ ಬದಲಾವಣೆ ಮಾಡಿದ ನಂತರ ತರೂರ್ ಟ್ವೀಟ್ ಮಾಡಿ ಕಥಾವಸ್ತು ಬೋಲ್ಡ್ ಆಗಿದೆ. ಚಲನಚಿತ್ರ ನಿರ್ಮಾಪಕರು ಯೂಟ್ಯೂಬ್‌ನಲ್ಲಿ ಚಿತ್ರದ ವಿವರಣೆಯನ್ನು ಅಪ್ಡೇಟ್ ಮಾಡಿದ್ದಾರೆ. ‘32,000 ಮಹಿಳೆಯರನ್ನು’ ‘3 ಮಹಿಳೆಯರು’ ಎಂದು ಬದಲಾಯಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಸಿನಿಮಾ ರಾಜಕೀಯದಲ್ಲಿಯೂ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್ ಈ ಸಿನಿಮಾ ತೋರಿಸಬಾರದು, ನಿಷೇಧ ಮಾಡಬೇಕೆಂದು ಒತ್ತಾಯಿಸಿದೆ. ಕೇರಳ ಕಾಂಗ್ರೆಸ್ ಮುಖಂಡ ಎಂಎಂ ಹಸ್ಸನ್ ಸಿನಿಮಾ ಬ್ಯಾನ್’ಗೆ ಕರೆ ನೀಡಿದ್ದರು. ಇದು ಸಮುದಾಯಗಳ ಮಧ್ಯೆ ದ್ವೇಷ ಹುಟ್ಟಿಸಬಹುದು ಎಂದಿದ್ದರು.
ಕೇರಳ ಸ್ಟೋರಿಯಲ್ಲಿ ಆದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ, ಸೋನಿಯಾ ಬಲಾನಿ ನಟಿಸಿದ್ದಾರೆ. ಸಿನಿಮಾ ಮೇ 5ರಂದು ರಿಲೀಸ್ ಆಗುತ್ತಿದೆ.
ಬಾಲಿವುಡ್ ನಟಿ ಆದಾ ಶರ್ಮಾ ನಟಿಸಿರುವ ದಿ ಕೇರಳ ಸ್ಟೋರಿ ಸಿನಿಮಾ ವಿಶೇಷವಾದ ಕಥೆಯೊಂದನ್ನು ಹೇಳುತ್ತದೆ. ಯುವತಿಯರು ದಕ್ಷಿಣಭಾರತದ ಪುಟ್ಟ ರಾಜ್ಯ ಕೇರಳದಿಂದ ಹೇಗೆ ನಾಪತ್ತೆಯಾದರು, ಹೇಗೆ ಅವರ ಬ್ರೈನ್ ವಾಶ್ ಮಾಡಲಾಯಿತು, ಯಾವ ರೀತಿ ಮತಾಂತರಕ್ಕೊಳಗಾದರು, ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ನಿಯೋಜಿಸಲ್ಪಟ್ಟರು ಎನ್ನುವುದನ್ನು ಈ ಸಿನಿಮಾ ರಿವೀಲ್ ಮಾಡುತ್ತದೆ.
ಸುದಿಪ್ಟೋ ಸೆನ್ ಅವರ ಮುಂಬರುವ ಸಿನಿಮಾದಲ್ಲಿ ಆದಾ ಶರ್ಮಾ ಅವರು ಫಾತಿಮಾ ಬಾ ಅವರ ಪಾತ್ರವನ್ನು ಮಾಡಿದ್ದಾರೆ. ಫಾತಿಮಾ ಬಾ ಕೇರಳದಲ್ಲಿ ನಾಪತ್ತೆಯಾಗಿ ಇಸ್ಲಾಂಗೆ ಬಲವಂತವಾಗಿ ಮತಾಂತರಿಸಲ್ಪಟ್ಟು ಐಸಿಸ್’ನಲ್ಲಿ ಸೇರಿಸಲ್ಪಟ್ಟ 32 ಸಾವಿರ ಮಹಿಳೆಯರಲ್ಲಿ ಒಬ್ಬರು.