ಚಾಮರಾಜನಗರ(Chamarajanagara): ನಗರಸಭೆಯ ಆಸ್ತಿ ತೆರಿಗೆಯ ರಿಜಿಸ್ಟರ್ ಅನ್ನು ವೈಟ್‌ನರ್‌ನಲ್ಲಿ ತಿದ್ದಿರುವ ಇಬ್ಬರು ಸಿಬ್ಬಂದಿ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ನಗರಸಭೆ ಆಯುಕ್ತ ಕರಿಬಸವಯ್ಯ ಅವರು ನೀಡಿರುವ ದೂರಿನ ಆಧಾರದಲ್ಲಿ ಹಿನ್ನೆಲೆಯಲ್ಲಿ ಜೂನ್ 27ರಂದೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆ ಚಾಮರಾಜನಗರ ನಗರಸಭೆಯಲ್ಲಿ ವಿಷಯ ನಿರ್ವಾಹಕಿಯಾಗಿದ್ದ ಸಿ.ಎಂ.ಗುಣಶ್ರೀ (ಹಾಲಿ ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿ) ಹಾಗೂ ಕಚೇರಿ ವ್ಯವಸ್ಥಾಪಕಿ ಮರ್ಸಿರೀಟಾ ಅವರು ಆಸ್ತಿ ತೆರಿಗೆ ರಿಜಿಸ್ಟರ್ ಅನ್ನು ವೈಟ್ನರ್ ಬಳಸಿ ತಿದ್ದುಪಡಿ ಮಾಡಿ ನಿವೇಶನಗಳನ್ನು ವಿಭಾಗಿಸಿ ಕರ್ತವ್ಯಲೋಪ ಎಸಗಿರುವುದು ತನಿಖೆ ವೇಳೆ ಸಾಬೀತಾಗಿತ್ತು.
ಈ ಕಾರಣದಿಂದ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನಗರಸಭೆ ಆಯುಕ್ತರಿಗೆ ಆದೇಶಿಸಿದ್ದರು.