ಗಂಗಾವತಿ: ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಬಿಸಿಯೂಟ ಸೇವಿಸಿ 32ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯು, ಮುಖ್ಯ ಶಿಕ್ಷಕಿ ಹಾಗೂ ಸಹಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಸಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ ಮತ್ತು ಸಹಶಿಕ್ಷಕ ಶರಣಬಸವರಾಜ ಅವರನ್ನು ಕರ್ತವ್ಯ ಲೋಪದ ಆರೋಪದ ಮೇರೆಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆ ಅವರ ಸೂಚನೆ ಮೆರೆಗೆ ಡಿಡಿಪಿಐ ಈ ಅಮಾನತು ಶಿಕ್ಷೆ ನೀಡಿದ್ದಾರೆ. ಅಶುದ್ಧ ನೀರಿನಿಂದ ಅಡುಗೆ ಮಾಡಿದ್ದರಿಂದ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂಬ ಪ್ರಾಥಮಿಕ ಮಾಹಿತಿ ಮೆರೆಗೆ ಇಲಾಖೆ ಈ ಕ್ರಮ ಕೈಗೊಂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಡಿಪಿಐ ಶ್ರೀಶೈಲ ಬಿರಾದಾರ ಅವರು, ಅಶುದ್ಧ ಕುಡಿಯುವ ನೀರನ್ನು ಅಡುಗೆಗೆ ಬಳಕೆ ಮಾಡಿರುವುದು ಮತ್ತು ಶಾಲಾ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿರುವ ಹಿನ್ನೆಲೆ ಮುಂದಿನ ಆದೇಶದವರೆಗೂ ಈ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದಿದ್ದಾರೆ.