ಮಡಿಕೇರಿ: ಕೊಡಗು ಜಿಲ್ಲೆಗೆ ಪ್ರವಾಸ ಬಂದಿದ್ದ ಮುಂಬಯಿ ಮೂಲದ ಯುವತಿಯೊಬ್ಬಳು ನಗರದ ಅನಧಿಕೃತ ಹೋಂ ಸ್ಟೇ ಒಂದರ ಬಾತ್ ರೂಂನಲ್ಲಿ ಕುಸಿದು ಬಿದ್ದು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹೋಂ ಸ್ಟೇ ಮಾಲಕರು ಮತ್ತು ಅವರ ವ್ಯವಸ್ಥಾಪಕರಿಗೆ 37,50,120 ರೂ.ಗಳ ಪರಿಹಾರವನ್ನು ಮೃತ ಯುವತಿಯ ಕುಟುಂಬಕ್ಕೆ ಪಾವತಿಸುವಂತೆ ಆದೇಶ ನೀಡಿದೆ.
ಮಡಿಕೇರಿಯಲ್ಲಿರುವ ಹೋಂ ಸ್ಟೇ ಮಾಲಕ ಶೇಕ್ ಮೊಹಮದ್ ಶೇಕ್ ಇಬ್ರಾಹಿಂ ಮತ್ತು ವ್ಯವಸ್ಥಾಪಕ ಮುಕ್ತಾರ್ ಅಹಮದ್ ಅವರಿಗೆ ಪರಿಹಾರ ನೀಡಲು ಸೂಚಿಸಲಾಗಿದೆ. ಹೋಂಸ್ಟೇ ಬುಕ್ ಮಾಡಿದ್ದ ಕರ್ಣಂಗೇರಿಯ ಪಾಂಡಿಯರಾಜನ್ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ. ಗ್ರಾಹಕರ ನ್ಯಾಯಾಲಯದ ಈ ಆದೇಶ ಜಿಲ್ಲೆಯಲ್ಲಿ ಅನಧಿಕೃತವಾಗಿ ಹೋಂ ಸ್ಟೇ ನಡೆಸುವವರ ಪಾಲಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.
ಪ್ರಕರಣ ಹಿನ್ನೆಲೆ
ಮುಂಬಯಿ ಮೂಲದ ಈಶ್ವರನ್ ಅವರ ಪುತ್ರಿ ವಿಘ್ನೇಶ್ವರಿ ಈಶ್ವರನ್ (24) ಮುಂಬಯಿ ಮೂಲದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಕೋವಿಡ್ ಕಾರಣದಿಂದ ವರ್ಕ್ ಫ್ರಂ ಹೋಂ ಮುಂದುವರಿದಿದ್ದ ಸಂದರ್ಭ ಆಕೆ ಮುಂಬಯಿಯಲ್ಲಿದ್ದು, ಆನ್‌ಲೈನ್ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು. 2021ರ ಅ. 23ರಂದು ವಿN°àಶ್ವರಿ ಬೆಂಗಳೂರಿಗೆ ಆಗಮಿಸಿ ಅಲ್ಲಿದ್ದ ಇತರ ನಾಲ್ವರು ಗೆಳತಿಯರಾದ ಮಧುಶ್ರೀ, ಅಕ್ಷತಾ, ಸುರಭಿ ಮತ್ತು ಕಶಿಶ್ ಸಕ್ಸೇನ ಅವರ ಜತೆ 24ರಂದು ಮಡಿಕೇರಿಗೆ ಆಗಮಿಸಿ ಆನ್‌ಲೈನ್‌ನಲ್ಲಿ ಈ ಮೊದಲೇ ಬುಕ್ ಮಾಡಿದ್ದ ಹೋಂ ಸ್ಟೇಯಲ್ಲಿ ತಂಗಿ ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ ತೆರಳಿದ್ದರು. ಈ ಯುವತಿಯರ ಬಳಗ ಮರುದಿನ ಬೆಳಗ್ಗೆ ಮಾಂದಲ್ ಪಟ್ಟಿಗೆ ತೆರಳುವ ಸಿದ್ದತೆಯಲ್ಲಿದ್ದರು.
ಅ. 24ರ ರಾತ್ರಿ 9ರ ವೇಳೆಗೆ ವಿಘ್ನೇಶ್ವರಿ ಸ್ನಾನ ಮಾಡಲೆಂದು ಬಾತ್ ರೂಂಗೆ ತೆರಳಿದ್ದರು. ಸಮಯ ಕಳೆದರೂ ಆಕೆ ಹೊರ ಬಾರದನ್ನು ಗಮನಿಸಿದ ಇತರ ಯುವತಿಯರು ನೋಡಿದಾಗ ವಿಘ್ನೇಶ್ವರಿ ಕುಸಿದು ಬಿದ್ದಿರುವುದು ಕಂಡು ಬಂದಿದೆ. ತತ್‌ಕ್ಷಣವೇ ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಮೃತ ಯುವತಿಯ ತಂದೆ ಈಶ್ವರನ್ ಅವರು ಮಡಿಕೇರಿಗೆ ಆಗಮಿಸಿ, ಮಗಳ ಸಾವಿನ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀಸರು ಎಫ್ಎಸ್‌ಎಲ್ ವರದಿ ಪಡೆದು ಪರಿಶೀಲಿಸಿದಾಗ ಗ್ಯಾಸ್ ಗೀಸರ್‌ನ ಕಾರ್ಬನ್ ಮೊನಾಕ್ಸೆಡ್ ವಿಷಾನಿಲದಿಂದ ವಿಘ್ನೇಶ್ವರಿ ಸಾವನಪ್ಪಿರುವುದು ದೃಢಪಡಿಸಿತ್ತು. ಹೋಂ ಸ್ಟೇ ಪರಿಶೀಲನೆ ನಡೆಸಿದ ಸಂದರ್ಭ ಬಾತ್ ರೂಂನಲ್ಲಿ ವೆಂಟಿಲೇಶನ್ ಇಲ್ಲದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಮಾತ್ರವಲ್ಲದೇ ಗ್ಯಾಸ್ ಗೀಸರ್ ಅನ್ನು ವಶಕ್ಕೆ ಪಡೆದುಕೊಂಡು ಅದರ ಮಾಲಕರು ಮತ್ತು ವ್ಯವಸ್ಥಾಪಕರ ವಿರುದ್ದ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಈ ಕುರಿತು ಮೃತ ಯುವತಿಯ ತಂದೆ ಈಶ್ವರನ್ ಅವರು 2023ರ ಜೂನ್ 30ರಂದು ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದರು.
ಮಹತ್ವದ ಆದೇಶ
ಪ್ರಕರಣದ ವಿಚಾರಣೆ ನಡೆಸಿದ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹೋಂ ಸ್ಟೇ ಮಾಲಕರಾದ ಶೇಕ್ ಮೊಹಮದ್ ಶೇಕ್ ಇಬ್ರಾಹಿಂ ಮತ್ತು ಹೋಂ ಸ್ಟೇ ವ್ಯವಸ್ಥಾಪಕ ಮುಕ್ತಾರ್ ಅಹಮದ್ ಅವರು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ 37,50,120 ರೂ.ಗಳನ್ನು ಶೇ. 6ರ ಬಡ್ಡಿಯನ್ನು ಸೇರಿಸಿ ಪಾವತಿಸಬೇಕು. ಸೇವಾ ನ್ಯೂನ್ಯತೆಗೆ ಪರಿಹಾರವಾಗಿ ಮಾನಸಿಕ ವೇದನೆ ಮತ್ತು ವ್ಯಾಜ್ಯದ ಖರ್ಚು ವೆಚ್ಚಗಳಿಗೆ 2 ಲಕ್ಷ ರೂ.ಗಳನ್ನು ಶೇ. 6 ಬಡ್ಡಿಯನ್ನು ಸೇರಿಸಿ ಆದೇಶ ಪಾಲನೆ ಆಗುವವರೆಗೂ ನೀಡಬೇಕು. ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.10ರಷ್ಟು ಬಡ್ಡಿಯನ್ನು ಸೇರಿಸಿ ಪಾವತಿಸಬೇಕು ಎಂದು ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು(ಪ್ರಭಾರ) ರೇಣುಕಾಂಬ ಮತ್ತು ಸದಸ್ಯರಾದ ಗೌರಮ್ಮಣ್ಣಿ ಅವರು ಆದೇಶ ನೀಡಿದ್ದಾರೆ.