ಮನೆ ರಾಜ್ಯ ಪೌರ ಕಾರ್ಮಿಕ ಮಹಿಳೆಗೆ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪಟ್ಟ

ಪೌರ ಕಾರ್ಮಿಕ ಮಹಿಳೆಗೆ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪಟ್ಟ

0

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯನ್ನು ಬಿಜೆಪಿ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಪೌರ ಕಾರ್ಮಿಕ ಮಹಿಳೆ, ಕನ್ನಡತಿ ಸವಿತಾ ಕಾಂಬಳೆ ಅವರಿಗೆ  ಮೇಯರ್ ಪಟ್ಟ ಒಲಿದುಬಂದಿದೆ. ಉಪಮೇಯರ್ ಆಗಿ ಮರಾಠಿಯ ಆನಂದ್ ಚವ್ಹಾಣ್ ಆಯ್ಕೆಯಾಗಿದ್ದಾರೆ.

ಬಿಜೆಪಿಯ‌ ಆನಂದ್ ಚವ್ಹಾಣ್​ 39 ಮತ ಹಾಗೂ ಕಾಂಗ್ರೆಸ್‌ ‌ನ ಜ್ಯೋತಿ ಕಡೋಲ್ಕರ್‌ 20 ಮತಗಳು ಪಡೆದುಕೊಂಡಿದ್ದಾರೆ. ಇದರೊಂದಿಗೆ ಆನಂದ್ ಗೆಲುವುಸಾಧಿಸಿದ್ದಾರೆ.

ಬೆಳಗಾವಿ ಮೇಯರ್​ ಆಗಿ ಆಯ್ಕೆಯಾಗಿರುವ ಸವಿತಾ ಕಾಂಬಳೆ ಅವರು ಕೆಲ ವರ್ಷಗಳ ಹಿಂದೆ ಇದೇ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. ನಂತರ ಹೆಲ್ಮೆಟ್​ ಕಂಪನಿಯೊಂದರಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ತದನಂತರ ಅವರು ಊದುಬತ್ತಿ ತಯಾರಿಕಾ ಘಟಕ ಶುರು ಮಾಡಿದ್ದರು. ಆದ್ರೆ, 2021ರಲ್ಲಿ ಅವರಿಗೆ ಒಲಿದು ಬಂದ ಅವಕಾಶ ಬಳಸಿಕೊಂಡು ಬಿಜೆಪಿಯಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಪೌರಕಾರ್ಮಿಕ ಆಗಿ ಕೆಲಸ ಮಾಡಿದ್ದ ಸವಿತಾ ಕಾಂಬಳೆ ಬೆಳಗಾವಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ವರ್ಷದ ಹಿಂದೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಹಾಗೂ ಉತ್ತರ ಕ್ಷೇತ್ರದ ಶಾಸಕರಾಗಿದ್ದ ಅನಿಲ್ ಬೆನಕೆ ಅವರ ಕೃಪಕಟಾಕ್ಷದಿಂದ ಮಹಾನಗರ ಪಾಲಿಕೆ ಮರಾಠಿ ಭಾಷಿಕರಿಗೆ ಒಲಿದಿತ್ತು. ವಿಧಾನಸಭಾ ಚುನಾವಣೆಯಲ್ಲಿ ಮರಾಠಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಮರಾಠಿ ಭಾಷಿಕ ಸದಸ್ಯರಿಗೆ ನೀಡಲಾಗಿತ್ತು. ಆದ್ರೆ, ಈ ಬಾರಿ ಮೇಯರ್ ಹುದ್ದೆ ಕನ್ನಡಗರಿಗೆ ಒಲಿದಿದ್ದರೆ, ಉಪಮೇಯರ್ ಮಾರಾಠಿಗೆ ನೀಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕನ್ನಡ ಹಾಗೂ ಮರಾಠಿ ಓಲೈಕೆ ಮಾಡಿದೆ ಎನ್ನುವ ಚರ್ಚೆ ಶುರುವಾಗಿದೆ.

21ನೇ ಅವಧಿಗೆ 2023ರ ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಮೇಯರ್‌ ಆಗಿ ಶೋಭಾ ಸೋಮನಾಚೆ ಹಾಗೂ ಉಪಮೇಯರ್‌ ಆಗಿ ರೇಷ್ಮಾ ಪಾಟೀಲ ಆಯ್ಕೆಯಾಗಿದ್ದರು. ಅವರ ಅಧಿಕಾರಾವಧಿ ಫೆ.5ಕ್ಕೆ ಪೂರ್ಣಗೊಂಡಿದ್ದರಿಂದ ಪಾಲಿಕೆಯ ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಇಂದು ಫೆ.15ರಂದು ಮೇಯರ್‌ – ಉಪ ಮೇಯರ್‌ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದ್ದರು.