ಮೈಸೂರು: ನ್ಯಾಯಾಲಯಕ್ಕೆ ನಕಲಿ ದಾಖಲೆ ಹಾಗೂ ವಿಳಾಸ ನೀಡಿ ಆರೋಪಿಯೊರ್ವನಿಗೆ ಜಾಮೀನು ನೀಡಿದ ಆರೋಪದ ಮೇರೆಗೆ ಮಹಿಳೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಮೈಸೂರಿನ ಫರೀದಾ ಬೀ (53) ಆರೋಪಕ್ಕೆ ಗುರಿಯಾದವರಾಗಿದ್ದು, ಈಕೆ ಇಮ್ರಾನ್ ಪಾಷ ಆರೋಪಿಗೆ ಮೈಸೂರಿನ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಜಾಮೀನು ನೀಡಿದ್ದರು. ಈ ವೇಳೆ ಆಕೆ ತಾನು ತಿಲಕ್ ನಗರದ ಚಿಕ್ಕವೀರಣ್ಣ ರಸ್ತೆಯ ಮನಸಂಖ್ಯೆ 3318/16-4 ರಲ್ಲಿ ವಾಸವಿರುವುದಾಗಿ ತಿಳಿಸಿದ್ದರಲ್ಲದೇ 50 ಸಾವಿರ ರೂ.ಮುಚ್ಚಳಿಕೆಗೆ ಮೈಸೂರು ತಾಲೂಕು ಜಯಪುರ ಗ್ರಾಮದ ಜಮೀನೊಂದರ ದಾಖಲೆಯನ್ನು ನೀಡಿದ್ದರು.
ಆರೋಪಿ ಇಮ್ರಾನ್ ಪಾಷ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನ್ಯಾಯಾಲಯವು ಫರೀದಾ ಬೀ ವಿರುದ್ಧ ಪ್ರತ್ಯೇಕ ಕೇಸ್ ದಾಖಲಿಸಿಕೊಂಡಿತ್ತು.ಹೀಗೆ ನ್ಯಾಯಾಲಯಕ್ಕೆ ಗೈರು ಹಾಜರಾಗದ ಕಾರಣ ಆರೋಪಿ ಇಮ್ರಾನ್ ಪಾಷಗೆ ಜಾಮೀನು ಮುಚ್ಚಳಿಕೆಗಾಗಿ 50 ಸಾವಿರ ರೂ. ವಸೂಲಾತಿಗಾಗಿ ಈಕೆ ನೀಡಿದ ಜಯಪುರದ ಗ್ರಾಮದ ಆಸ್ತಿಯನ್ನು ಜಪ್ತಿ ಮಾಡುವಂತೆ ನ್ಯಾಯಾಲಯವು ಜಯಪುರ ಗ್ರಾಮ ಪಂಚಾಯಿತಿನ ಪಿಡಿಓಗೆ ಆದೇಶಿಸಿತ್ತು.
ಆದರೆ ಅವರು ಸದರಿ ಜಮೀನು ಫರೀದಾ ಬೀ ಹೆಸರಿನಲ್ಲಿ ಇಲ್ಲ. ಅಲ್ಲದೆ ಗ್ರಾಮ ಪಂಚಾಯಿತಿ ಮತ್ತು ಕಾರ್ಯದರ್ಶಿಯ ಸೀಲ್ ಗಳು ನಕಲಿಯಾಗಿವೆ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಜೊತೆಗೆ ಮೈಸೂರು ನಗರದ ಪಾಲಿಕೆಯ ಫರೀದಾ ಬೀ ವಾಸವಿದ್ದಾರೆ ಎಂದು ನ್ಯಾಯಕ್ಕೆ ತಿಳಿಸಿದ್ದ ಆಸ್ತಿಯು ನೆಲಸಮವಾಗಿದ್ದು, ಪ್ರಸ್ತುತ ಅದು ಖಾಲಿ ನಿವೇಶನವಾಗಿದೆ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿತು.
ಈ ಹಿನ್ನೆಲೆಯಲ್ಲಿ 5ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಜೆ.ಎಂ.ಎಫ್.ಸಿ ಮೈಸೂರು ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಲಯದ ಮುಖ್ಯ ಲಿಪಿಕಾಧಿಕಾರಿಗಳಾದ ಎಸ್. ಎನ್. ಧರ್ಮೇಂದ್ರ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಲಕ್ಷ್ಮಿಪುರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.