ಮನೆ ಕಾನೂನು ಚಾಲನಾ ಪರೀಕ್ಷೆಯಲ್ಲಿ ಭಾಗಿಯಾಗಲು ಅವಕಾಶ ಕೋರಿ ಕೇರಳ ಹೈಕೋರ್ಟ್ ಮೊರೆ ಹೋದ ವಿಕಲಚೇತನ ವ್ಯಕ್ತಿ

ಚಾಲನಾ ಪರೀಕ್ಷೆಯಲ್ಲಿ ಭಾಗಿಯಾಗಲು ಅವಕಾಶ ಕೋರಿ ಕೇರಳ ಹೈಕೋರ್ಟ್ ಮೊರೆ ಹೋದ ವಿಕಲಚೇತನ ವ್ಯಕ್ತಿ

0

ಅಗತ್ಯ ವೈದ್ಯಕೀಯ ಅನುಮತಿ ಪಡೆದಿದ್ದರೂ ಚಾಲನಾ ಪರವಾನಗಿ ನೀಡದೆ ಇರುವುದನ್ನು ಪ್ರಶ್ನಿಸಿ ವಿಕಲಚೇತನ ವ್ಯಕ್ತಿಯೊಬ್ಬರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ .

Join Our Whatsapp Group

ಬಲತೋಳು ಮತ್ತು ಕೈಯಲ್ಲಿ ವ್ಯತ್ಯಾಸ ಇರುವ ಕಾರಣಕ್ಕೆ ಶೇ 40ರಷ್ಟು ಭಿನ್ನ ಸಾಮರ್ಥ್ಯ ಹೊಂದಿರುವ ವ್ಯಕ್ತಿ ಈ ಮನವಿ ಸಲ್ಲಿಸಿದ್ದಾರೆ.

ತಮಗೆ 18 ವರ್ಷವಾದ ಬಳಿಕ ವಿಕಲಚೇತನ ವ್ಯಕ್ತಿಯು ಡ್ರೈವಿಂಗ್‌ ಶಾಲೆಯನ್ನು ಸಂಪರ್ಕಿಸಿ ಚಾಲನಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೋರಿದರು. ಆದರೆ ಅಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಸಂಪರ್ಕಿಸುವಂತೆ ಸೂಚಿಸಲಾಯಿತು.

ವೈದ್ಯಕೀಯ ಅರ್ಹತಾ ಪ್ರಮಾಣಪತ್ರದೊಂದಿಗೆ ಆರ್‌ಟಿಒ ಅಧಿಕಾರಿಗಳನ್ನು ಅವರು ಸಂಪರ್ಕಿಸಿದರು. ವೈದ್ಯಕೀಯ ಪ್ರಮಾಣಪತ್ರದಲ್ಲಿ ವಾಹನವನ್ನು ಸೂಕ್ತವಾಗಿ ಮಾರ್ಪಾಟು ಮಾಡಿದರೆ ವ್ಯಕ್ತಿಯು ಚಾಲನಾ ಪರವಾನಗಿ ಹೊಂದಲು ಅರ್ಹ ಎಂದು ತಿಳಿಸಲಾಗಿತ್ತು. ಆದರೆ, ಇದಕ್ಕೆ ಆಕ್ಷೇಪಿಸಿದ ಆರ್‌ಟಿಒ ಅಧಿಕಾರಿಗಳು ಹಾಗೆಲ್ಲಾ ಅಗತ್ಯಕ್ಕೆ ತಕ್ಕಂತೆ ವಾಹನ ಮಾರ್ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಮನವಿಯನ್ನು ತಿರಸ್ಕರಿಸಿದರು. ಬಳಿಕ ಉಪ ಸಾರಿಗೆ ಆಯುಕ್ತರ ಮುಂದೆ ಮನವಿ ಸಲ್ಲಿಸಿದಾಗಲೂ ಅದು ತಿರಸ್ಕೃತವಾಯಿತು.

ಈ ಹಿನ್ನೆಲೆಯಲ್ಲಿ ವಿಕಲಚೇತನ ಯುವಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಉಪ ಸಾರಿಗೆ ಆಯುಕ್ತರ ನಿರ್ಧಾರ ಸಂವಿಧಾನದ 14 ನೇ ವಿಧಿಯಡಿ ಒದಗಿಸಿದ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ವ್ಯಕ್ತಿಗಳನ್ನು ಅಂಗವಿಕಲರು ಎಂದು ತಾರತಮ್ಯ ಎಸಗುವುದನ್ನು ಕಾನೂನಿನಲ್ಲಿ ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಜೊತೆಗೆ ವಿಕಲಚೇತನರಿಗೆ ಸಮಾನ ಅವಕಾಶ ನಿರಾಕರಿಸುವುದು ಸಂವಿಧಾನದ 19 ಮತ್ತು 21ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದಿರುವ ಅವರು ಮೋಟಾರು ವಾಹನ ಕಾಯಿದೆಯ ಸೆಕ್ಷನ್‌ಗಳನ್ನು  ಮನಬಂದಂತೆ ಬಳಸಿ ತನಗೆ ಚಾಲನಾ ಪರೀಕ್ಷೆ ತೆಗೆದುಕೊಳ್ಳದಂತೆ ನಿರಾಕರಿಸಲಾಗಿದೆ. ವೈದ್ಯಕೀಯ ಪ್ರಮಾಣಪತ್ರವನ್ನು ಅಧಿಕಾರಿಗಳು ಪರಿಗಣಿಸಿಲ್ಲ. ಇದು ಅವರ ಪ್ರತಿಕೂಲ ಮನೋಭಾವವನ್ನು ಸೂಚಿಸುತ್ತದೆ ಎಂಬುದಾಗಿ ಆರೋಪಿಸಿದ್ದಾರೆ.

ಹಿಂದಿನ ಲೇಖನಅರಂತೋಡು: ಕಾಲು ಜಾರಿ ಹೊಳೆಗೆ ಬಿದ್ದು ವ್ಯಕ್ತಿ ಸಾವು
ಮುಂದಿನ ಲೇಖನನೀಟ್ ಪರೀಕ್ಷೆ ಅಕ್ರಮಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಿ: ರಾಹುಲ್ ಗಾಂಧಿ