ಮೈಸೂರು: ಉತ್ತರ ಭಾರತ ಪ್ರವಾಸಕ್ಕೆ ತೆರಳಿ ಮನಾಲಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಮೈಸೂರಿನ ಕುಟುಂಬ ಸುರಕ್ಷಿತವಾಗಿ ಮರಳಿದೆ.
ಉದ್ಯಮಿಯಾಗಿರುವ ಶ್ರೀನಿಧಿ, ನವ್ಯಾ, ವೀರ್ ಹಾಗೂ ಅವರ ಪತ್ನಿ ಜು. 6ರಂದು ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ವೊಂದರ ಪ್ಯಾಕೇಜ್ ಮೂಲಕ ಹಿಮಾಚಲಪ್ರದೇಶದ ಪ್ರವಾಸಿ ತಾಣ ವೀಕ್ಷಣೆಗೆ ತೆರಳಿದ್ದರು.
ಮನಾಲಿಗೆ ಹೋಗಿದ್ದಾಗ ಧಾರಾಕಾರ ಮಳೆಯಿಂದಾಗಿ ರಸ್ತೆ, ಸೇತುವೆ ಸಂಪರ್ಕ ಕಡಿತಗೊಂಡಿತ್ತು. ಹೀಗಾಗಿ ಮುಂದೆ ಪಯಣ ಮಾಡಲು ಅಥವಾ ವಾಪಸ್ ಬರಲು ಆಗದಂತಹ ಪರಿಸ್ಥಿತಿ ಉಂಟಾಗಿದ್ದರಿಂದ ಮನಾಲಿಯ ಹೋಟೆಲ್ ನಲ್ಲಿಯೇ ಮೂರು ದಿನ ಕಾಲ ಕಳೆಯಬೇಕಾಯಿತು ಎಂದು ಶ್ರೀನಿಧಿ ಘಟನೆಯನ್ನು ವಿವರಿಸಿದರು.
ಧಾರಾಕಾರ ಮಳೆ, ಪ್ರವಾಹದಿಂದ ವಿದ್ಯುತ್ ಸಂಪರ್ಕವೂ ಬಹುತೇಕ ಕಡಿತಗೊಂಡಿತ್ತು. ಇದರಿಂದ ಮೊಬೈಲ್ ಗಳ ಸಿಗ್ನಲ್, ಬ್ಯಾಟರಿಗಳು ಇರದಿದ್ದ ಕಾರಣ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಹೋಟೆಲ್ ನಲ್ಲಿ ಉಳಿದುಕೊಂಡಿದ್ದರಿಂದ ಊಟ, ತಿಂಡಿಗೆ ಏನೂ ತೊಂದರೆ ಆಗಲಿಲ್ಲ. ಮಳೆ ಕೊಂಚ ಕಡಿಮೆಯಾಗಿ ತಾತ್ಕಾಲಿಕ ರಸ್ತೆ ಸಂಪರ್ಕ ಕಲ್ಪಿಸಿದ ಬಳಿಕ ಭಾರತೀಯ ಸೇನೆ ನೆರವಿನಿಂದ ಚಂಡೀಗಢಕ್ಕೆ ತೆರಳಿ, ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸ್ ಆಗಿದ್ದೇವೆ. ನಮ್ಮ ತಂಡದಲ್ಲಿ 50 ಜನರಿದ್ದು, ಎಲ್ಲರೂ ಸುರಕ್ಷಿತವಾಗಿ ಮರಳಿದ್ದಾರೆ ಎಂದು ಹೇಳಿದರು.