ಮನೆ ಅಪರಾಧ ಬಾರ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ : ಪತ್ನಿಯ ಮುಂದೆಯೇ ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

ಬಾರ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ : ಪತ್ನಿಯ ಮುಂದೆಯೇ ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

0

ಆನೇಕಲ್: ಆನೇಕಲ್ ಬಳಿಯ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಗಯ್ಯನದೊಡ್ಡಿಯಲ್ಲಿ ಭೀಕರ ಕೊಲೆ ಸಂಭವಿಸಿದೆ. ಬಾರ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.

ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಶುಕ್ರವಾರ ರಾತ್ರಿ ಸ್ನೇಹಿತರ ಜೊತೆ ಶ್ಯಾನುಭೋಗನಹಳ್ಳಿಯ ತರಂಗಿಣಿ ಬಾರ್‌ಗೆ ಮದ್ಯಪಾನಕ್ಕೆ ತೆರಳಿದ್ದ. ಇದೇ ಬಾರ್‌ನಲ್ಲಿ ಕಾಂತರಾಜು ಮತ್ತು ಆತನ ಗ್ಯಾಂಗ್ ಜೋರಾಗಿ ಮಾತನಾಡುತ್ತಾ ಮದ್ಯಪಾನ ಮಾಡುತ್ತಿದ್ದರು. ಸುರೇಶ್ “ನಿಧಾನವಾಗಿ ಮಾತನಾಡಿ” ಎಂದು ಹೇಳಿದ ಹಿನ್ನಲೆಯಲ್ಲಿ ಇಬ್ಬರ ನಡುವೆ ನೂಕಾಟ-ತಳ್ಳಾಟ ಸಂಭವಿಸಿದೆ.

ಇದಾದ ಬಳಿಕ ಸುರೇಶ್ ಮನೆಗೆ ಹಿಂತಿರುಗಿದ್ದ. ಆದರೆ ಕಾಂತರಾಜು ಹಾಗೂ ಆತನ ಗ್ಯಾಂಗ್ ಆತನನ್ನು ಹಿಂಬಾಲಿಸಿ ಮನೆಗೆ ನುಗ್ಗಿ, ಪತ್ನಿಯ ಮುಂದೆಯೇ ಸುರೇಶ್ ಹೊಟ್ಟೆ ಮತ್ತು ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾದರು. ಗಾಯಾಳು ಸುರೇಶ್‌ನ್ನು ತಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಘಟನೆಯ ಮಾಹಿತಿ ಪಡೆದ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ನಾಗೇಶ್ ಕುಮಾರ್, ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಮತ್ತು ಬನ್ನೇರುಘಟ್ಟ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಂತರಾಜು ಮತ್ತು ಆತನ ಸಹಚರರ ಪತ್ತೆಗೆ ಶೋಧ ಮುಂದುವರೆಸಿದ್ದಾರೆ.