ಮುಜಾಫರ್ಪುರ: ಬಿಹಾರದ ಮುಜಾಫರ್ ಪುರ ಜಿಲ್ಲೆಯ ರಾಮದಯಾಳು ರೈಲು ನಿಲ್ದಾಣದ ಬಳಿಯ ಜುಗ್ಗಿ ಕ್ಲಸ್ಟರ್ನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ನಾಲ್ವರು ಅಪ್ರಾಪ್ತ ಬಾಲಕಿಯರು ಸಜೀವ ದಹನಗೊಂಡಿದ್ದಾರೆ.
ಸೋಮವಾರ ರಾತ್ರಿ ಸಂಭವಿಸಿದ ಕೊಳಗೇರಿ ಬೆಂಕಿ ಅವಘಡದಲ್ಲಿ ಇತರ ಏಳು ಜನರಿಗೆ ಸುಟ್ಟ ಗಾಯಗಳಾಗಿದ್ದು, ಜಿಲ್ಲೆಯ ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಸ್ ಕೆಎಂಸಿಎಚ್) ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಕಿ ಅನಾಹುತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಬೆಂಕಿಯಲ್ಲಿ ಮೃತಪಟ್ಟ ನಾಲ್ವರು ಬಾಲಕಿಯರು ಮೂರರಿಂದ 12 ವರ್ಷದೊಳಗಿನವರಾಗಿದ್ದು, ನರೇಶ್ ರಾಮ್ ಎಂಬ ವ್ಯಕ್ತಿಯ ಪುತ್ರಿಯರೆಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಶಾರಿ (ಮುಜಾಫರ್ಪುರ) ವೃತ್ತಾಧಿಕಾರಿ ಸುಧಾಂಶು ಶೇಖರ್ ಮಾತನಾಡಿ, ಬೆಂಕಿ ವೇಗವಾಗಿ ವ್ಯಾಪಿಸಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ವಲ್ಪ ಸಮಯದ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದರು.
ಗಾಯಾಳುಗಳು ಸೇರಿದಂತೆ ಪ್ರತಿ ಸಂತ್ರಸ್ತರ ಸಂಬಂಧಿಕರಿಗೆ 4 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುವ ಪ್ರಕ್ರಿಯೆಯನ್ನು ಆಡಳಿತವು ಪ್ರಾರಂಭಿಸಿದೆ ಎಂದು ಶೇಖರ್ ಹೇಳಿದರು.