ಮನೆ ಅಪರಾಧ ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಗೆಳೆಯನ ಬಂಧನ

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಗೆಳೆಯನ ಬಂಧನ

0

ಬೆಂಗಳೂರು:  ಮನೆ ಮುಂದೆ ಬೀಗ ಹಾಕಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳ್ಳತನ ಪ್ರಕರಣದಲ್ಲಿ ಮನಕಲಕುವ ವಿಚಾರವೊಂದು ಬಯಲಾಗಿದೆ.

Join Our Whatsapp Group

ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಯೊಬ್ಬ ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ತನ್ನ ಸ್ನೇಹಿತನ ಪತ್ನಿಗೆ ಚಿಕಿತ್ಸೆಗಾಗಿ ಬೈಕ್‌ ಕಳ್ಳತನ ಮಾಡುತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾಫ್ಟ್ ವೇರ್‌ ಎಂಜಿನಿಯರ್‌ ಮನೆ ಮುಂದೆ ನಿಲುಗಡೆ ಮಾಡಿದ್ದ ಬೈಕ್‌ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಹೆಸರುಘಟ್ಟ ನಿವಾಸಿ ಅಶೋಕ್‌(30) ಮತ್ತು ಆತನ ಸಹಚರ ಸತೀಶ್‌ ಅಲಿಯಾಸ್‌ ಸತ್ಯ (34) ಎಂಬವರನ್ನು ಬಂಧಿಸಿದ್ದರು. ಅವರಿಂದ 10.71 ಲಕ್ಷ ರೂ. ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ಅಶೋಕ್‌ ವಿರುದ್ಧ ಕೆಲವೊಂದು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆತನ ಪತ್ನಿ ದೂರವಾಗಿದ್ದರು. ಈ ವೇಳೆ ಆತನ ಸ್ನೇಹಿತ ತನ್ನ ಮನೆಗೆ ಕರೆದೊಯ್ದು ಕೆಲ ದಿನಗಳ ಕಾಲ ಆಶ್ರಯ ನೀಡಿದ್ದ. ಈ ವೇಳೆ ಸ್ನೇಹಿತನ ಪತ್ನಿಗೆ ಕ್ಯಾನ್ಸರ್‌ ಇರುವುದು ಗೊತ್ತಾಗಿದೆ. ಆದರೆ, ಆಕೆಯ ಚಿಕಿತ್ಸೆ ವೆಚ್ಚ ಭರಿಸಲು ಸ್ನೇಹಿತನಿಂದ ಸಾಧ್ಯವಾಗುತ್ತಿಲ್ಲ ಎಂಬುದು ಗೊತ್ತಾಗಿದೆ. ಆದರಿಂದ ಆರೋಪಿ ತನ್ನ ಸಹಚರ ಸತೀಶ್‌ ಜತೆ ಸೇರಿ ಕೆಟಿಎಂ ಮತ್ತು ಪಲ್ಸರ್‌ ಬೈಕ್‌ ಗಳನ್ನು ಹ್ಯಾಂಡಲ್‌ ಲಾಕ್‌ ಮುರಿದು ಕಳ್ಳತನ ಮಾಡುತ್ತಿದ್ದ. ಬಳಿಕ ಅವುಗಳನ್ನು ಗ್ರಾಮಾಂತರ ಭಾಗದಲ್ಲಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ. ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 8 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.