ಮೈಸೂರು: ನಂಜನಗೂಡು ತಾಲೂಕು ನಗರ್ಲೆ ಗ್ರಾಮದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಾಗೂ ಪಶು ಆಸ್ಪತ್ರೆ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದ್ದು, ಮಕ್ಕಳು, ಮಹಿಳೆಯರು ಸಂಜೆ ವೇಳೆ ರಸ್ತೆಯಲ್ಲಿ ಓಡಾಡಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಾಗೂ ಪಶು ಆಸ್ಪತ್ರೆಯಲ್ಲಿ ಕುಡುಕರು ಕುಡಿದು ಅಲ್ಲೇ ಬಿಟ್ಟು ಹೋಗಿರುವ ಬಿಯರ್ ಬಾಟಲಿಗಳು ಹಾಗೂ ಎಣ್ಣೆ ಪ್ಯಾಕೆಟ್ ಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತವೆ.
ಆದರೆ ಇದೆಲ್ಲವನ್ನೂ ಗಮನಿಸಬೇಕಾದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಾಗೂ ಪಶು ಆಸ್ಪತ್ರೆಯ ಆಡಳಿತ ವರ್ಗ ಹಾಗೂ ಸಿಬ್ಬಂದಿಗಳು ನಿರ್ಲಕ್ಷ್ಯವಹಿಸಿದ್ದಾರೆ.
ಆಯುರ್ವೇದ ಆಸ್ಪತ್ರೆಗೆ ಬರುವ ರೋಗಿಗಳು ಚಿಕಿತ್ಸೆ ಗುಣಪಡಿಸಿಕೊಂಡು ಹೋಗುವ ಬದಲು ಖಾಯಿಲೆ ಅಂಟಿಸಿಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೇ ನಗರ್ಲೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಪಕ್ಕದಲ್ಲಿದ್ದು ಪಿಡಿಓ, ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯಾಲಯಕ್ಕೆ ಅದೇ ರಸ್ತೆಯಲ್ಲಿ ಸಾಗಬೇಕು. ಸದರಿ ಸ್ಥಳದ ದುರಾವಸ್ಥೆ ಕಣ್ಣಿಗೆ ಬಿದ್ದರೂ ಪಂಚಾಯತಿ ಅಧಿಕಾರಿಗಳು ಸಂಬಂಧವೇ ಇಲ್ಲದಂತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಷಯವಾಗಿ ನಗರ್ಲೆ ಪಂಚಾಯಿತಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ತಮಗೂ ಅದಕೂ ಸಂಬಂಧವಿಲ್ಲದವರಂತೆ ಬೇಜವಾಬ್ದಾರಿಯ ಹಾರಿಕೆ ಉತ್ತರವನ್ನು ನೀಡುತ್ತಾರೆ. ನಗರ್ಲೆ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛತೆ ಹೆಸರಿನಲ್ಲಿ ಅಧಿಕಾರಿಗಳು ಭ್ರಷ್ಟಾಚರ ಮಾಡಿರುವ ಬಗ್ಗೆ ಊರಿನವರು ದಾಖಲೆಗಳನ್ನು ಸಾಮಾಜಿಕ ಹೂರಾಟಗಾರರಿಗೆ ನೀಡಿದ್ದಾರೆ, ಅವರು ಒಂದೆರಡು ದಿನದಲ್ಲಿಯೇ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದರ ಜೊತೆಗೆ ಪತ್ರಿಕಾ ಹೇಳಿಕೆಯನ್ನು ನೀಡುವ ಬಗ್ಗೆ ಮಾಹಿತಿ ಬಂದಿದೆ.
ಪಂಚಾಯತಿ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿರುವ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಾಗೂ ಪಶು ಆಸ್ಪತ್ರೆ ಜಾಗವನ್ನು ಸ್ವಚ್ಛಗೊಳಿಸುವ ಜೊತೆಗೆ ಕುಡುಕರು ಆ ಸ್ಥಳವನ್ನು ದುರುಪಯೋಗಪಡಿಸಿಕೊಳ್ಳದಂತೆ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸ್ಥಳೀಯ ನಿವಾಸಿಗಳ ಬಯಕೆಯಾಗಿದೆ.