ಪವರ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಮನ್ನಣೆ: “ಎ” ಶ್ರೇಣಿ ಪಡೆದ ರಾಜ್ಯದ ಮೊದಲ ಎಸ್ಕಾಂ ಎಂಬ ಹೆಗ್ಗಳಿಕೆ
ಮೈಸೂರು: ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜತೆಗೆ ವಿದ್ಯುತ್ ಉಳಿತಾಯ, ಫೀಡರ್ ನಿರ್ವಹಣೆ ಹೀಗೆ ಹಲವು ವಿಭಾಗಗಳಲ್ಲಿ ಬದ್ಧತೆಯೊಂದಿಗೆ ಕಾರ್ಯನಿರ್ವಹಣೆ ಮಾಡಿರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ವು ಪವರ್ ಫೈನಾನ್ಸ್ ಕಾರ್ಪೊರೇಷನ್ (PFC) ಆಫ್ ಇಂಡಿಯಾ ನೀಡುವ ರೇಟಿಂಗ್‌ನಲ್ಲಿ “ಎ” ಶ್ರೇಣಿಗೆ ಉನ್ನತೀಕರಣಗೊಂಡಿದೆ.
ನಗರದ ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಿಗಮದ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ ಅವರು, “ಸೆಸ್ಕ್ ನ ನಿರಂತರ ಪರಿಶ್ರಮ, ಉತ್ಕೃಷ್ಟತೆಯ ಬದ್ಧತೆಯಿಂದ ರಾಷ್ಟ್ರೀಯ ಮಟ್ಟದಲ್ಲಿ ಕಂಪನಿಗಳ ಶ್ರೇಯಾಂಕ (Ranking) ನೀಡುವ ಪವರ್ ಫೈನಾನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಅವರು ನೀಡುವ ರೇಟಿಂಗ್‌ನಲ್ಲಿ ಸೆಸ್ಕ್ “ಬಿ” ಶ್ರೇಣಿಯಿಂದ “ಎ” ಶ್ರೇಣಿಗೆ ಉನ್ನತೀಕರಣಗೊಂಡಿದೆ. ಆ ಮೂಲಕ “ಎ” ಶ್ರೇಯಾಂಕ ಪಡೆದಿರುವ ರಾಜ್ಯದ ಏಕೈಕ ಎಸ್ಕಾಂ ನಮ್ಮದು ಎಂದು ಹೆಮ್ಮೆಯಿಂದ ಘೋಷಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುವ ಮೂಲಕ “ಎ- ಪ್ಲಸ್” ಶ್ರೇಣಿ ಪಡೆಯುವ ಗುರಿ ಇದೆ’’ ಎಂದು ತಿಳಿಸಿದರು.
“ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಉತ್ತಮ ಕಾರ್ಯನಿರ್ವಹಣೆಯಿಂದಾಗಿ ಈ ಶ್ರೇಯಾಂಕ ಪಡೆಯಲು ಸಾಧ್ಯವಾಗಿದೆ. ದೇಶದ ಎಲ್ಲಾ ಎಸ್ಕಾಂಗಳ ಸೇವೆಯನ್ನು ಪವರ್ ಫೈನಾನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಪ್ರತಿ ವರ್ಷವೂ ಗಮನಿಸಿ ಶ್ರೇಯಾಂಕನೀಡುತ್ತದೆ. ಸೆಸ್ಕ್ ಉತ್ತಮ ಕಾರ್ಯನಿರ್ವಹಣೆ ಮಾಡಿರುವ ಹಿನ್ನಲೆಯಲ್ಲಿ ಬಿ ಗ್ರೇಡ್ ನಿಂದ ಎ ಗ್ರೇಡ್‌ಗೆ ಉನ್ನತೀಕರಣಗೊಂಡಿದೆ. ಅಲ್ಲದೇ ರಾಷ್ಟ್ರಮಟ್ಟದಲ್ಲಿ 16ನೇ ಶ್ರೇಯಾಂಕವನ್ನು ಸೆಸ್ಕ್ ಪಡೆದಿದ್ದು, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಇದರಿಂದ ಸೆಸ್ಕ್‌ಗೆ ಕೇಂದ್ರ ಮತ್ತು ರಾಜ್ಯದಿಂದ ಅಗತ್ಯ ಅನುದಾನ ಸಿಗುವುದರೊಂದಿಗೆ ಬ್ಯಾಂಕ್ ನಿಂದ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ’’ ಎಂದರು.
“ದೇಶದಲ್ಲೇ ಮೊದಲ ಬಾರಿಗೆ 3682 ಹಾಡಿ ಮನೆಗಳಿಗೆ ಸೋಲಾರ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಾತ್ರವಲ್ಲದೆ ಟ್ರಾನ್ಸ್ ಫಾರ್ಮರ್‌ಗಳ ತುರ್ತು ಬದಲಿಗೆ 63 ಕೆವಿ, 100 ಕೆವಿ ಮತ್ತು 250 ಕೆವಿ ಟ್ರಾನ್ಸ್ ಫಾರ್ಮರ್‌ಗಳ ಬ್ಯಾಂಕ್ ಸಹ ತೆರೆಯಲಾಗಿದೆ. ಕೊಡಗು ಜಿಲ್ಲೆಯಲ್ಲಿ ಪ್ರತಿಬಾರಿ ಮಳೆಗಾಲದಲ್ಲಿ ಸಮಸ್ಯೆ ಉಂಟಾಗುವುದನ್ನು ಮನಗಂಡು ಸಂಪೂರ್ಣ ಬದಲೀಕರಣಕ್ಕೆ ಕಾಮಗಾರಿ ಆರಂಭಿಸಲಾಗಿದೆ”.
– ಜಿ. ಶೀಲಾ, ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್.
ವಿದ್ಯುತ್ ನಷ್ಟದಲ್ಲಿ ಇಳಿಕೆ:
“ಸಮರ್ಪಕ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಪರಿಣಾಮ ವಿದ್ಯುತ್ ನಷ್ಟ ತಡೆಯುವಲ್ಲಿಯೂ ಸೆಸ್ಕ್ ಪ್ರಗತಿ ಸಾಧಿಸಿದೆ. ಕಳೆದ ಬಾರಿ 10.3ರಷ್ಟಿದ್ದ ವಿದ್ಯುತ್ ನಷ್ಟದ ಪ್ರಮಾಣ ಇದೀಗ 9.03ಕ್ಕೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು 7ರಷ್ಟಕ್ಕೆ ಇಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಅಲ್ಲದೆ, ರೈತರಿಗೆ ನಿರಂತರ ವಿದ್ಯುತ್ ಪೂರೈಕೆಗೆ ಆದ್ಯತೆ ನೀಡಲಾಗಿದ್ದು, ಟ್ರಾನ್ಸ್‌ಫಾರ್ಮರ್‌ಗಳ ತ್ವರಿತ ದುರಸ್ತಿ ಮಾಡುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗಿದೆ. 23,061 ಅಪಾಯಕಾರಿ ಸ್ಥಳ ಗುರುತಿಸಿ ಸರಿಪಡಿಸಲಾಗಿದೆ. ಕಂಟ್ರೋಲ್ ರೂಂ ನಂಬರ್ ಗಳ ಮೂಲಕ ಜನರ ಸಮಸ್ಯೆಗೆ ಶೀಘ್ರ ಸ್ಪಂದಿಸುವ ಕೆಲಸ ನಿರಂತರವಾಗಿ ಮಾಡಲಾಗುತ್ತಿದೆ” ಎಂದರು.
ಸೋಲಾರ್ ವಿದ್ಯುತ್ ಉತ್ಪಾದನೆಗೆ ಆದ್ಯತೆ:
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಶೀಲಾ ಅವರು ಮಾತನಾಡಿ, “ಸೆಸ್ಕ್ ವತಿಯಿಂದ ಪಿಎಂ ಕುಸುಮ್-ಸಿ ಯೋಜನೆಯಡಿ 500 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ 110 ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ರಾಜ್ಯ ಸರ್ಕಾರದ ನೆರವಿನಿಂದ ಅಗತ್ಯ ಸರಕಾರಿ ಭೂಮಿ ಸಿಕ್ಕಿದ್ದು, ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ. ಈಗಾಗಲೇ ಚಾಮರಾಜ ನಗರದಲ್ಲಿ ಯೋಜನೆ ಅನುಷ್ಠಾನವಾಗುತ್ತಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ”, ಎಂದು ತಿಳಿಸಿದರು.
ಅಕ್ರಮ ಕೇಬಲ್ ಗಳಿಗೆ ಕತ್ತರಿ
“ಸೆಸ್ಕ್‌ನ ವಿದ್ಯುತ್ ಕಂಬಗಳನ್ನು ಬಳಸಿಕೊಂಡು ಖಾಸಗಿ ಟಿವಿ ಕೇಬಲ್ ಮತ್ತು ಇಂಟರ್‌ನೆಟ್ ಕೇಬಲ್‌ಗಳ ವೈರ್‌ಗಳನ್ನು ಎಳೆಯಲಾಗಿದೆ. ಶುಲ್ಕ ಪಾವತಿಸಿ ಅನುಮತಿ ಪಡೆದವರಿಂದ ಡಿಸೆಂಬರ್ ಅಂತ್ಯಕ್ಕೆ 78.78 ಲಕ್ಷ ರೂ. ಸಂಗ್ರಹವಾಗಿದ್ದು, ಯಾರಾದರೂ ಅನುಮತಿ ಪಡೆಯದೇ ವಿದ್ಯುತ್ ಕಂಬಗಳನ್ನು ಬಳಸುತ್ತಿದ್ದರೆ ಅಂತಹ ಕಂಪನಿಗಳ ಕೇಬಲ್‌ಗಳನ್ನು ತೆರವುಗೊಳಿಸಲಾಗುವುದು” ಎಂದು ತಾಂತ್ರಿಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಹೇಳಿದರು.
“ಕುಸುಮ್- ಬಿ ಮತ್ತು ಕುಸುಮ್- ಸಿ ಸೇರಿದಂತೆ ಸೋಲಾರ್ ವಿದ್ಯುತ್ ಯೋಜನೆಯಿಂದ ಶೇ.25ರಷ್ಟು ವಿದ್ಯುತ್ ಖರೀದಿ ಕಡಿಮೆಯಾಗಲಿದ್ದು, ಸೆಸ್ಕ್ ಗೆ ಆಗಲಿರುವ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಪ್ರಧಾನ ಮಂತ್ರಿ ಸೌರಗೃಹ ಯೋಜನೆಯಡಿ 752 ಮನೆಗಳಿಗೆ ಸೋಲಾರ್ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಜತೆಗೆ ಪ್ರಧಾನ ಮಂತ್ರಿ ಜನ್ ಮನ್ ಯೋಜನೆಡಯಿಡಿಗಳ ಹಾಡಿಗಳ 1,085 ಆದಿವಾಸಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ” ಎಂದು ಹೇಳಿದರು.
ಫೀಡರ್ ನಿರ್ವಹಣೆಗೆ ಒತ್ತು:
ಸೆಸ್ಕ್‌ನ ತಾಂತ್ರಿಕ ವಿಭಾಗದ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರು ಮಾತನಾಡಿ, “ಪ್ರತಿ ಕಾರ್ಯ ಮತ್ತು ಪಾಲನಾ ವಿಭಾಗದಲ್ಲಿ ಪ್ರತಿ ತಿಂಗಳು ಅತ್ಯಂತ ಹೆಚ್ಚು ವಿದ್ಯುತ್ ಅಡಚಣೆ ಉಂಟಾಗಿರುವ 11 ಕೆವಿ ಮಾರ್ಗವನ್ನು ಗುರುತಿಸಿ, ಸಮಗ್ರ ನಿರ್ವಹಣೆ ಮಾಡಲಾಗುತ್ತಿದೆ. ಫೀಡರ್ ನಿರ್ವಹಣೆ ಅಭಿಯಾನದಡಿ ಒಟ್ಟು 272 ಸಂಖ್ಯೆ 11ಕೆವಿ ಫೀಡರ್‌ಗಳನ್ನು ನಿರ್ವಹಣೆ ಮಾಡಲಾಗುತ್ತಿದ್ದು, ಇದರಿಂದ ಶೇ.50%ಕ್ಕೂ ಹೆಚ್ಚು ಅಡಚಣೆಗಳು ಕಡಿಮೆಯಾಗಿರುತ್ತದೆ” ಎಂದು ಮಾಹಿತಿ ನೀಡಿದರು.
ವಿತರಣಾ ಪರಿವರ್ತಕಗಳ ವಿಫಲತೆ ಹಾಗೂ ವಿದ್ಯುತ್ ಅವಘಡಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆ ಅಭಿಯಾನದಡಿ ಅಪಾಯಕಾರಿ ಸ್ಥಿತಿಯಲ್ಲಿರುವ ಪರಿವರ್ತಕಗಳು ಮತ್ತು ಪದೇ ಪದೆ ವಿಫಲವಾಗುತ್ತಿದ್ದ ಪರಿವರ್ತಕಗಳನ್ನು ಗುರುತಿಸಿ ಅವುಗಳ ಸಮಗ್ರ ನಿರ್ವಹಣೆಗೆ ಕ್ರಮವಹಿಸಲಾಗುತ್ತಿದೆ. ಅಭಿಯಾನದ ಅಡಿಯಲ್ಲಿ ಈವರೆಗೂ ವಿವಿಧ ಸಾಮರ್ಥ್ಯದ ಒಟ್ಟು 4642 ವಿತರಣಾ ಪರಿವರ್ತಕಗಳ ನಿರ್ವಹಿಸಲಾಗಿರುತ್ತದೆ” ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೆಸ್ಕ್ ನ ಹಿರಿಯ ಅಧಿಕಾರಿಗಳು ಇದ್ದರು.














