ಮನೆ ರಾಜ್ಯ ಜೂ.23ರಿಂದ ಮೈಸೂರಿನಲ್ಲಿ ಆಷಾಢ ಸಂಭ್ರಮ

ಜೂ.23ರಿಂದ ಮೈಸೂರಿನಲ್ಲಿ ಆಷಾಢ ಸಂಭ್ರಮ

0

ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ನೆಲೆಸಿರುವ ಮೈಸೂರು ನಗರದಲ್ಲಿ ಆಷಾಢ ಸಂಭ್ರಮಕ್ಕೆ ಸಿದ್ಧತೆ ಪ್ರಾರಂಭವಾಗಿದ್ದು, ಜೂ.23ರಿಂದ ಆಷಾಢ ಅಧಿಕೃತವಾಗಿ ಪ್ರಾರಂಭವಾಗಲಿದೆ.

Join Our Whatsapp Group


ಕಳೆದ ಬಾರಿಗಿಂತಲೂ ಈ ಬಾರಿ ಅದ್ಧೂರಿ ಆಷಾಢ ಮಾಸಕ್ಕೆ ಸಿದ್ಧತೆ ನಡೆದಿದೆ. ಏಕೆಂದರೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಹಾಗೂ ಮೈಸೂರು ಜಿಲ್ಲೆಯವರೇ ಮುಖ್ಯಮಂತ್ರಿ ಆಗಿರುವ ಹಿನ್ನೆಲೆಯಲ್ಲಿ ಈ ಬಾರಿ ಅದ್ಧೂರಿ ಆಷಾಢ ಆಚರಣೆಗೆ ಸಿದ್ದತೆ ನಡೆಯಲಿದೆ. ಮಾತ್ರವಲ್ಲದೆ, ವರ್ಷದಿಂದ ವರ್ಷಕ್ಕೆ ಆಷಾಢಕ್ಕೆ ಆಗಮಿಸುವ ಭಕ್ತರು ಹಾಗೂ ಗಣ್ಯರ ಸಂಖ್ಯೆಯೂ ಹೆಚ್ಚಳವಾಗಲಾರಂಭಿಸಿರುವುದು ಆಷಾಢ ಸಂಭ್ರಮವನ್ನು ಹಿಮ್ಮಡಿಗೊಳಿಸಿದೆ.
ಜು10ಕ್ಕೆ ವರ್ಧಂತಿ: ಜೂನ್ 23, 30- ಜುಲೈ7, 14ರ ನಾಲ್ಕು ಆಷಾಢ ಶುಕ್ರವಾರಗಳು ಹಾಗೂ ಜುಲೈ10ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ ಜರುಗಲಿದೆ. ಅಷ್ಟು ದಿನ ದಿನವೊಂದಕ್ಕೆ ಲಕ್ಷಕ್ಕೂ ಅಧಿಕ ಮಂದಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುವುದು ವಿಶೇಷ.
ಹೊರ ರಾಜ್ಯದ ಭಕ್ತರು: ಆಷಾಢದಲ್ಲಿ ಶ್ರೀ ಚಾಮುಂಡೇಶ್ವರಿಯ ದರ್ಶನಕ್ಕೆ ವಿದೇಶವೂ ಸೇರಿ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದಾರೆ. ಅದರಲ್ಲೂ ತಮಿಳುನಾಡು, ಕೇರಳ, ಆಂಧ್ರ ಹಾಗೂ ಮಹಾರಾಷ್ಟ್ರ ಭಾಗದಿಂದಲೂ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸುವುದು ವಿಶೇಷ. ಈ ಹಿಂದೆ ತಮಿಳುನಾಡು ಸಿಎಂ ಆಗಿದ್ದ ಜಯಲಲಿತಾ ಸಹ ಚಾಮುಂಡೇಶ್ವರಿಯ ಪರಮ ಭಕ್ತೆಯಾಗಿದ್ದರು. ಮಾತ್ರವಲ್ಲದೆ, ಪ್ರತಿ ವರ್ಷ ಆಷಾಢದಲ್ಲಿ ಆಗಮಿಸಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದರು. ಅಂತೆಯೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ ದರ್ಶನ್ ಅವರು ಚಾಮುಂಡೇಶ್ವರಿಯ ದರ್ಶನಕ್ಕೆ ಆಗಮಿಸಿದರೆ, ಕೇಂದ್ರ ಸಚಿವೆಯಾದ ಶೋಭಾ ಕರಂದ್ಲಾಜೆ ಮೆಟ್ಟಿಲು ಹತ್ತಿ ಪ್ರತಿ ವರ್ಷ ಹರಕೆ ತೀರಿಸುವುದು ಅವರ ವಿಶೇಷತೆಯಾಗಿದೆ.
ಗಣ್ಯರ ವಾಹನಕ್ಕೂ ಬೀಳುತ್ತಾ ಬ್ರೇಕ್: ಕಳೆದ ಸಾಲಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ಶಿಫಾರಸ್ಸು ವದಿಂದ ಬೆಂಗಳೂರಿನ ಸಾವಿರಾರು ಮಂದಿ ಗಣ್ಯಾತೀ ಗಣ್ಯರ ಹೆಸರಿನಲ್ಲಿ ಕಾರಿನಲ್ಲಿ ಬಂದಿದ್ದರು. ಈ ಹಿನ್ನೆಲೆ ಚಾಮುಂಡಿ ಬೆಟ್ಟದ ರಸ್ತೆ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ಸಂಚಾರ ದಟ್ಟಣೆ ಯುಂಟಾಗಿ ಬಸ್‍ನಲ್ಲಿ ಸಂಚರಿಸುವ ಭಕ್ತರೂ ತೊಂದರೆ ಅನುಭವಿಸುವಂತಾಗಿತ್ತು. ಇದಾದ ಬಳಿಕ ಶಾಸಕ ವಾಸು ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬಸ್‍ನಲ್ಲಿ ಸರಳವಾಗಿ ಸಂಚರಿಸಿ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದರು. ಸದ್ಯ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಗಣ್ಯರಿಗೂ ಬಸ್‍ನಲ್ಲೇ ಪ್ರಯಾಣ ಮಾಡುವ ವ್ಯವಸ್ಥೆ ಜಾರಿಯಾಗುವುದೇ ಕಾದು ನೋಡಬೇಕಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಬರುತ್ತಿರುವ ಮೊದಲ ಆಷಾಢ ಹಬ್ಬ ಅಲ್ಲದೆ, ಸಿಎಂ ತವರಿನಲ್ಲೇ ಇದು ವಿಶೇಷವಾಗಿರುವ ಹಿನ್ನೆಲೆಯಲ್ಲಿ ಇನ್ನಿಲ್ಲದ ಸಡಗರದ ತಯಾರಿಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಬಗೆಹರಿಯದ ನೀರಿನ ಸಮಸ್ಯೆ:
ಚಾಮುಂಡಿ ಬೆಟ್ಟದಲ್ಲಿ 2011ರ ಜನಗಣತಿಗೆ ಅನುಸಾರವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ವಿಶೇಷ ದಿನಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಣಿವಿಲಾಸದಿಂದ ಪೈಪ್‍ಲೈನ್ ಮೂಲಕ ಚಾಮುಂಡಿ ಬೆಟ್ಟದ ಮೇಲ್ಭಾಗಕ್ಕೆ ನೀರು ಪೂರೈಸುವ ಕಾಮಗಾರಿ ನಗರ ತುದಿ ಬಾಗದವರೆಗೆ ತೆರಳಿ ಅಲ್ಲಿಗೆ ಸ್ಥಗಿತವಾಗಿದೆ.
ಬೆಟ್ಟದವರೆಗೆ ಕಾಮಗಾರಿ ಕೈಗೊಳ್ಳಲು ಚಾಮುಂಡಿ ಬೆಟ್ಟದ ತಪ್ಪಲಿನ ವಿವಾದ ಭೂಮಿಯಲ್ಲೂ ಕಾಮಗಾರಿ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಮೈಸೂರು ಅರಸರ ಅನುಮತಿಯೂ ಅಗತ್ಯವಾಗಿದೆ. ಮಾತ್ರವಲ್ಲದೆ, ಅರಣ್ಯ ಇಲಾಖೆಯಿಂದಲೂ ಅನುಮತಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಕ್ರಮವಹಿಸಿ ಶೀಘ್ರ ನೀರಿನ ಸಮಸ್ಯೆ ಬಗೆಹರಿಸುವಂತೆ ಇತ್ತಿಚೇಗೆ ನಡೆದ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಪ್ರತಾಪಸಿಂಹ ಖಡಕ್ ಎಚ್ಚರಿಕೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.
ನಗರದಲ್ಲೂ ಸಂಭ್ರಮ:
ನಗರದ ಸುಣ್ಣದಕೇರಿ, ದೊಡ್ಡ ಒಕ್ಕಲಗೇರಿ ದೇವಾಸ್ಥಾನಗಳು, ಶಂಕರಮಠದ ಶಾರದಾಂಬೆ, ತೊಗರಿ ಬೀದಿಯ ಕೊಲ್ಲಾಪುರದಮ್ಮ, ವಿಶ್ವೇಶ್ವರನಗರ ರಾಜರಾಜೇಶ್ವರಿ, ವಿಜಯನಗರದ ಸಪ್ತಮಾತೃಕಾ, ಕುವೆಂಪುನಗರದ ಬಂದಂತಮ್ಮ ಕಾಳಮ್ಮ, ಕೆಜಿ ಕೊಪ್ಪಲಿನ ಚಾಮುಂಡೇಶ್ವರಿ ದೇವಾಲಯಗಳಲ್ಲಿಯೂ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಗಳು ನಡೆಯಲಿವೆ.

ಹಿಂದಿನ ಲೇಖನಟಿಂಬರ್ ಮರ್ಚೆಂಟ್ ಮಾಲೀಕರ ಮನೆಯಲ್ಲಿ ಕಳ್ಳತನ: 47 ಲಕ್ಷ ನಗದು 100 ಗ್ರಾಂ ಚಿನ್ನಾಭರಣ ಕಳುವು
ಮುಂದಿನ ಲೇಖನಕಣ್ಣೂರು: ಬೀದಿ ನಾಯಿಗಳ ದಾಳಿ; ಮೂಗ ಬಾಲಕ ಸಾವು