ಅಮೇಠಿ: ಉತ್ತರ ಪ್ರದೇಶದ ಅಮೇಠಿ ಕಾಂಗ್ರೆಸ್ ಕಚೇರಿ ಮೇಲೆ ಭಾನುವಾರ ಮಧ್ಯರಾತ್ರಿ ದುಷ್ಕರ್ಮಿಗಳ ಗುಂಪು ದಾಳಿ ಮಾಡಿದೆ.
ಕಚೇರಿ ಮುಂದೆ ನಿಲ್ಲಿಸಲಾಗಿದ್ದ ಹತ್ತಾರು ವಾಹನಗಳಿಗೆ ಹಾನಿ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಈ ಕುರಿತಂತೆ ಸ್ಥಳ ಪರಿಶೀಲನೆ ಬಳಿಕ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಮುಂದಾಗಿದ್ದಾರೆ.
ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಈ ಕುರಿತ ವಿಡಿಯೊವನ್ನು ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ಕಾರಿನ ಕಿಟಕಿ ಒಡೆದು, ಗಾಜಿನ ತುಂಡುಗಳು ನೆಲದ ಮೇಲೆ ಬಿದ್ದಿರುವುದನ್ನು ಕಾಣಬಹುದಾಗಿದೆ. ಈ ಕುಕೃತ್ಯದ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಕಾಂಗ್ರೆಸ್ ಟೀಕಿಸಿದೆ. ಸೋಲುವ ಭಯದಿಂದ ಸ್ಮೃತಿ ಇರಾನಿ ದುಷ್ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದೆ.
ಸೋಲುವ ಭಯದಿಂದ ಬಿಜೆಪಿಯ ಗೂಂಡಾಗಳು ಬೆತ್ತ ಮತ್ತು ರಾಡ್‌ಗಳನ್ನು ಬಳಸಿ ಕಾಂಗ್ರೆಸ್ ಕಚೇರಿಯ ಹೊರಗೆ ದಾಳಿ ನಡೆಸಿದ್ದಾರೆ. ಅಲ್ಲಿ ಪಾರ್ಕಿಂಗ್ ಮಾಡಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಮೇಥಿ ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕೆಲ ಸ್ಥಳೀಯರ ವಾಹನಗಳು ಸಹ ಹಾನಿಗೊಳಗಾಗಿವೆ. ಪೊಲೀಸರು ಸಹ ಈ ಘಟನೆ ಬಗ್ಗೆ ಮೂಕಪ್ರೇಕ್ಷಕರಾಗಿದ್ದರು. ಈ ಘಟನೆಯು ಬಿಜೆಪಿ ಅಮೇಠಿಯಲ್ಲಿ ಬಹಳ ಕೆಟ್ಟದಾಗಿ ಸೋಲಲಿದೆ ಎಂಬುದಕ್ಕೆ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.