ರಾಮನಗರ: “ಆರ್‌ಸಿಬಿ ತಂಡ ಕಪ್ ಗೆದ್ದ ಖುಷಿಯಲ್ಲಿ ಯೋಚನೆ ಮಾಡದೆ ವಿಜಯೋತ್ಸವ ಆಯೋಜಿಸಿದ್ದರಿಂದ ಈ ದುರ್ಘಟನೆ ಸಂಭವಿಸಿತು. ಇದೊಂದು ಆತುರದ ನಿರ್ಧಾರದಿಂದ ಉಂಟಾದ ಪರಿಣಾಮ. ನಾವು ಕೂಡ ತಪ್ಪು ಮಾಡಿದ್ದೇವೆ” ಎಂದು ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಅವರು ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 11 ಜನರ ಅಮೂಲ್ಯ ಜೀವಗಳು ನಷ್ಟವಾದುದು ಶೋಕಾನ್ವಿತ ಸಂದರ್ಭ ಎಂದು ಕಂಬನಿ ಮಿಡಿದಿದ್ದಾರೆ. “ಇಂದು ಬಕ್ರೀದ್ ಹಬ್ಬದ ಸಂದರ್ಭ. ನಾವು ಈ ಹಬ್ಬವನ್ನು ತ್ಯಾಗ-ಬಲಿದಾನದ ಪ್ರತೀಕವಾಗಿ ಆಚರಿಸುತ್ತೇವೆ. ಈ ಹಿನ್ನೆಲೆಯಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಸಲ್ಲಿಸಿದ್ದೇವೆ” ಎಂದು ಅವರು ಹೇಳಿದರು.
ಇಕ್ಬಾಲ್ ಹುಸೇನ್ ಅವರು ಆತ್ಮಾವಲೋಕನ ತೋರಿ, “ಈ ಸಮಾರಂಭವನ್ನು ಭದ್ರತೆ, ಸಿದ್ಧತೆಗಳೊಂದಿಗೆ ಸರಿಯಾಗಿ ನಿರ್ವಹಿಸಬೇಕಿತ್ತು. ಆತುರದಿಂದ ಕಾರ್ಯಕ್ರಮ ಮಾಡಿ ನಾವೂ ತಪ್ಪು ಮಾಡಿದ್ದೇವೆ, ಅಧಿಕಾರಿಗಳೂ ತಪ್ಪು ಮಾಡಿದ್ದಾರೆ. ಈ ಸಂದರ್ಭಕ್ಕೆ ಅನುಮತಿ ಕೊಡಬಾರದು. ಇದು ನಿಜಕ್ಕೂ ದುಃಖದ ಸಂಗತಿ” ಎಂದು ಒಪ್ಪಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಅನುಮತಿ ಕೊಡಲೇ ಬಾರದಿತ್ತು. ಈ ಘಟನೆ ನಮಗೆ ಹೆಚ್ಚು ದುಖಃವನ್ನ ತಂದಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದರು. ಮುಂದಿನ ದಿನಗಳಲ್ಲಿ ಇಂಥ ದುರಂತಗಳು ಪುನರಾವೃತವಾಗದಂತೆ ಎಲ್ಲರೂ ಜವಾಬ್ದಾರಿತನದಿಂದ ನಡೆದುಕೊಳ್ಳಬೇಕು” ಎಂದು ಇಕ್ಬಾಲ್ ಹೇಳಿದರು.














