ಬೆಂಗಳೂರು: ಪ್ರೀತಿಸಿದ ಹುಡುಗಿಯನ್ನೇ ಕೊಲೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಯುವಕನನ್ನು ದಕ್ಷಿಣ ಗೋವಾದ ಪೊಲೀಸರು ಬಂಧಿಸಿದ್ದಾರೆ. ರೋಶ್ನಿ ಮೋಸೆಸ್ ಎಂ (22) ಕೊಲೆಯಾದ ಯುವತಿಯಾಗಿದ್ದು, ಸಂಜಯ್ ಕೆವಿನ್ ಎಂ (22) ಕೊಲೆಯ ಆರೋಪಿ ಎಂದು ಗುರುತಿಸಲಾಗಿದೆ.
ಬೆಂಗಳೂರು ನಿವಾಸಿಗಳಾದ ಸಂಜಯ್ ಹಾಗೂ ರೋಶ್ನಿ ಕೆಲ ಸಮಯದಿಂದ ಪ್ರೀತಿಸುತ್ತಿದ್ದರು. ಮದುವೆಯಾಗಬೇಕು ಎಂದು ನಿಶ್ಚಯಿಸಿದ ಈ ಜೋಡಿ ತಮ್ಮ ಊರಿನಿಂದ ಗೋವಾಗೆ ಬಂದಿದ್ದಾರೆ. ಗೋವಾದಲ್ಲಿ ಒಂದೆರಡು ದಿನಗಳು ಕಳೆದ ಬಳಿಕ ಇಬ್ಬರ ಮಧ್ಯೆ ಮನಸ್ತಾಪ ಶುರುವಾಗಿದೆ.
ಯಾವುದೋ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆರಂಭವಾಗಿದ್ದು, ಸಿಟ್ಟಿಗೆದ್ದ ಸಂಜಯ್ ಆಕೆಯನ್ನು ಕತ್ತು ಸೀಳಿ ಕೊಲೆ ಮಾಡಿ ಗೋವಾದ ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ಎಸೆದಿದು ತಾನೊಬ್ಬನೇ ಬೆಂಗಳೂರಿಗೆ ವಾಸಪ್ ಆಗಿದ್ದಾನೆ ಎನ್ನಲಾಗಿದೆ.
ಇತ್ತ ಅರಣ್ಯ ಪ್ರದೇಶದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾದ ಬಗ್ಗೆ ತನಿಖೆ ಆರಂಭಿಸಿದ ದಕ್ಷಿಣ ಗೋವಾದ ಪೊಲೀಸರಿಗೆ ಸಂಜಯ್ ವಿಚಾರ ತಿಳಿದು ಬಂದಿದ್ದು, ಕೂಡಲೇ ಬೆಂಗಳೂರಿಗೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ.














