ಮನೆ ಸುದ್ದಿ ಜಾಲ 71 ವರ್ಷಗಳ ಕರ್ನಾಟಕ ಚುನಾವಣೆ ಇತಿಹಾಸದ ಪಯಣದ ವಿವರ

71 ವರ್ಷಗಳ ಕರ್ನಾಟಕ ಚುನಾವಣೆ ಇತಿಹಾಸದ ಪಯಣದ ವಿವರ

0

ಕಳೆದ ಎರಡ್ಮೂರು ತಿಂಗಳಿನಿಂದ ಕರ್ನಾಟಕದಲ್ಲಿ ಚುನಾವಣೆಯದ್ದೇ ವಿಷಯ. ಎಲ್ಲಿ ನೋಡಿದ್ರೂ ಚುನಾವಣೆಯದ್ದೇ ಮಾತು. ಕರುನಾಡಲ್ಲಿ ಸದ್ಯ ಪ್ರಜಾಪ್ರಭುತ್ವದ ಹಬ್ಬ ಅಂತಿಮ ಘಟ್ಟ ತಲುಪಿದೆ. ಅದರೊಂದಿಗೆ ಕರ್ನಾಟಕದಲ್ಲಿ ಮೊದಲ ವಿಧಾನಸಭಾ ಚುನಾವಣೆ ನಡೆದು 71 ವರ್ಷಗಳೇ ಕಳೆದು ಹೋಗಿವೆ. ಮೊದಲ ವಿಧಾನಸಭಾ ಚುನಾವಣೆ ನಡೆದಿದ್ದು 1952ರಲ್ಲಿ. ಆದರೆ, ಆಗಿನ್ನು ಪೂರ್ಣ ಪ್ರಮಾಣದ ಕರ್ನಾಟಕ ರಚನೆಯಾಗಿದ್ದಿಲ್ಲ. ಮೈಸೂರು ಪ್ರಾಂತ್ಯ ಮಾತ್ರ ಇತ್ತು. ಅಲ್ಲಿಂದ ಇಲ್ಲಿಯವರೆಗೂ 15 ಸಾರ್ವತ್ರಿಕ ಚುನಾವಣೆಗಳು ನಡೆದಿದ್ದು, ಇದು 16ನೇ ಸಾರ್ವತ್ರಿಕ ಚುನಾವಣೆ.

2ನೇ ಚುನಾವಣೆ ಬರುವ ಹೊತ್ತಿಗೆ ಭಾಷಾವಾರು ರಾಜ್ಯಗಳ ರಚನೆಯಾಗಿ ಈಗಿನ ಕರ್ನಾಟಕ, ಆಗಿನ ಮೈಸೂರು ರಾಜ್ಯ ಉದಯಿಸಿತ್ತು. 1957ರಲ್ಲಿ ವಿಧಾನಸಭೆಗೆ ಎರಡನೇ ಚುನಾವಣೆ ನಡೆಯಿತು. 1952 ರಿಂದ 1957ರ ಅವಧಿಯಲ್ಲಿ ಕರ್ನಾಟಕ ಬರೋಬ್ಬರಿ ಮೂರು ಮುಖ್ಯಮಂತ್ರಿಗಳನ್ನು ಕಂಡಿತು. ಕೆಂಗಲ್‌ ಹನುಮಂತಯ್ಯ, ಕಡಿದಾಳ್‌ ಮಂಜಪ್ಪ, ಎಸ್‌ ನಿಜಲಿಂಗಪ್ಪ ಅವರು ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಎರಡನೇ ಅವಧಿಯಲ್ಲಿಯೂ ಕೂಡ ಎಸ್‌ ನಿಜಲಿಂಗಪ್ಪ, ಬಿಡಿ ಜತ್ತಿ ಸಿಎಂ ಆಗಿದ್ದರು. ಇದುವರೆಗೂ ಕರ್ನಾಟಕ 22 ವಿವಿಧ ಮುಖ್ಯಮಂತ್ರಿಗಳನ್ನು ಕಂಡಿದೆ. ಸ್ವಾತಂತ್ರ್ಯ ನಂತರ ಕೆಸಿ ರೆಡ್ಡಿ ಅವರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ನೇಮಕವಾಗಿದ್ದರು.

ಮೊದಲ ವಿಧಾನಸಭಾ ಚುನಾವಣೆ – 1952 (ಮೈಸೂರು ಪ್ರಾಂತ್ಯ)
ಇನ್ನು, ಮಾರ್ಚ್‌ 26, 1952ರಂದು ಕರ್ನಾಟಕದ ಮೊದಲ ವಿಧಾನಸಭಾ ಚುನಾವಣೆ ನಡೆದಿತ್ತು. 80 ಕ್ಷೇತ್ರಗಳಲ್ಲಿ 99 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ 19 ಕ್ಷೇತ್ರಗಳು ದ್ವಿಸದ್ಯರನ್ನು ಹೊಂದಿದ್ದರೆ, 61 ಕ್ಷೇತ್ರಗಳು ಏಕಸದಸ್ಯರನ್ನು ಹೊಂದಿದ್ದವು. ಈ ಚುನಾವಣೆಯಲ್ಲಿ 394 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 99 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 74 ಸ್ಥಾನಗಳನ್ನು ಗೆದ್ದರೆ, ಕಿಸಾನ್‌ ಮಜ್ದೂರ್‌ ಪ್ರಜಾ ಪಕ್ಷ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಸೋಶಿಯಲಿಸ್ಟ್‌ ಪಾರ್ಟಿ ಮೂರು ಸ್ಥಾನಗಳನ್ನು ಗೆದ್ದರೆ, ಎಸ್‌ಸಿಎಫ್‌ 2, ಸಿಪಿಐ 1 ಹಾಗೂ 11 ಸ್ವತಂತ್ರ ಅಭ್ಯರ್ಥಿಗಳು ಜಯಗಳಿಸಿದ್ದರು.

ಎರಡನೇ ವಿಧಾನಸಭಾ ಚುನಾವಣೆ – 1957 (ಮೈಸೂರು ರಾಜ್ಯ)
ಎರಡನೇ ವಿಧಾನಸಭಾ ಚುನಾವಣೆ ಫೆಬ್ರವರಿ 25, 1957ರಲ್ಲಿ ನಡೆಯಿತು. ಭಾಷಾವಾರು ರಾಜ್ಯ ರಚನೆಯಾದ ಬಳಿಕ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಿತು. 179 ಕ್ಷೇತ್ರಗಳಲ್ಲಿ 208 ಸ್ಥಾನಗಳಿಗೆ ಈ ವೇಳೆ ಚುನಾವಣೆ ನಡೆದಿತ್ತು. ಇದರಲ್ಲಿ 29 ದ್ವಿಸದಸ್ಯ ಕ್ಷೇತ್ರಗಳಾದರೆ, 179 ಏಕಸದಸ್ಯ ಕ್ಷೇತ್ರಗಳಾಗಿದ್ದವು. 27 ಕ್ಷೇತ್ರಗಳನ್ನು ಎಸ್‌ಸಿಗೆ, ಒಂದು ಕ್ಷೇತ್ರವನ್ನು ಎಸ್‌ಟಿಗೆ ಮೀಸಲಿಡಲಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ 150 ಸ್ಥಾನಗಳನ್ನು ಗೆದ್ದರೆ, ಪ್ರಜಾ ಸೋಶಿಯಲಿಸ್ಟ್‌ ಪಕ್ಷ 18, ಸಿಪಿಐ 01, ಎಸ್‌ಸಿಎಫ್‌ 2, ಪಿಡಬ್ಲ್ಯೂಪಿಐ 2, 35 ಸ್ವತಂತ್ರ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದರು.

ಕ್ಷೇತ್ರಗಳ ಸಂಖ್ಯೆ ಹೆಚ್ಚಳ: 
ನಾಲ್ಕನೇ ವಿಧಾನಸಭೆ ಚುನಾವಣೆ 1967ರಲ್ಲಿ ನಡೆಯಿತು. ಈ ವೇಳೆ ವಿಧಾನಸಭಾ ಸ್ಥಾನಗಳ ಸಂಖ್ಯೆ 208ರಿಂದ 216ಕ್ಕೆ ಏರಿಕೆಯಾಗಿತು. ಈ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಎಸ್‌ಸಿಗೆ, ಮೂರು ಕ್ಷೇತ್ರಗಳನ್ನು ಎಸ್‌ಟಿಗೆ ಮೀಸಲಿಡಲಾಗಿತ್ತು. ಅದಾದ ಬಳಿಕ 1978ರಲ್ಲಿಆರನೇ ವಿಧಾನಸಭಾ ಚುನಾವಣೆ ವೇಳೆ ಸ್ಥಾನಗಳ ಸಂಖ್ಯೆ 216 ರಿಂದ 224ಕ್ಕೆ ಏರಿಸಲಾಯಿತು. ನಂತರ 2008ರಲ್ಲಿ 224 ಕ್ಷೇತ್ರಗಳನ್ನು ಪುನರ್‌ವಿಂಗಡನೆ ಮಾಡಿ, ಭೌಗೋಳಿಕವಾಗಿ ಬದಲಾಯಿಸಲಾಯಿತು. ಕ್ಷೇತ್ರಗಳಿಗೆ ಮರುನಾಮಕರಣ ಮಾಡಲಾಯಿತು. ಎಸ್‌ಸಿ, ಎಸ್‌ಟಿ ಮೀಸಲು ಕ್ಷೇತ್ರಗಳನ್ನು ಬದಲಾಯಿಸಲಾಯಿತು. ಸದ್ಯ ಅದೇ ಆಧಾರದಲ್ಲಿ ಚುನಾವಣೆ ನಡೆಯುತ್ತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ: ಮೊದಲ ಆರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನದ್ದೇ ಪ್ರಾಬಲ್ಯ ಇತ್ತು. ಅಂದರೆ 1972 ರಿಂದ 1978ರವರೆಗೂ ಕಾಂಗ್ರೆಸ್‌ನವರೇ ಮುಖ್ಯಮಂತ್ರಿಯಾಗಿದ್ದರು. ಅದಾದ ಬಳಿಕ 7 ಮತ್ತು 8ನೇ ವಿಧಾನಸಭೆಯಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು. ಮತ್ತೆ 9ನೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕೈಗೆ ಅಧಿಕಾರ ಸಿಕ್ಕಿತ್ತು. 1994ರಲ್ಲಿ ಜೆಡಿಎಸ್‌ಗೆ ಅಧಿಕಾರ ಸಿಕ್ಕರೆ, 1999ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು.

ಆದರೆ, 2004ರಲ್ಲಿ ಅತಂತ್ರ ಸನ್ನಿವೇಶ ಸೃಷ್ಟಿಯಾಗಿ, ಮೊದಲು ಕಾಂಗ್ರೆಸ್‌-ಜೆಡಿಎಸ್‌, ಬಳಿಕ ಜೆಡಿಎಸ್‌ – ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಿತ್ತು. 2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ, 2013ರಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಿತು. 2018ರಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬರಲಿಲ್ಲ. ಆಗ ದೊಡ್ಡ ಪಕ್ಷವಾಗಿದ್ದ ಬಿಜೆಪಿಯ ಬಿಎಸ್‌ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಬಹುಮತ ಸಾಬೀತುಪಡಿಸದೇ ರಾಜೀನಾಮೆ ನೀಡಿದರು. ಬಳಿಕ ಕಾಂಗ್ರೆಸ್‌ ಜೆಡಿಎಸ್‌ ಸರ್ಕಾರ ರಚನೆಯಾಯಿತು. ಅದು ಕೂಡ ಪತನವಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂತು.