ಮನೆ ಸುದ್ದಿ ಜಾಲ ಬೆಂಗಳೂರಿನ ಆವಲಹಳ್ಳಿ ಬಳಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆ; 225 ಜಿಲೆಟಿನ್ ಕಡ್ಡಿ, 50...

ಬೆಂಗಳೂರಿನ ಆವಲಹಳ್ಳಿ ಬಳಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆ; 225 ಜಿಲೆಟಿನ್ ಕಡ್ಡಿ, 50 ಡಿಟೋನೇಟರ್ ವಶ

0

ಬೆಂಗಳೂರು, ಜೂನ್ 9: ಬೆಂಗಳೂರಿನಲ್ಲಿ ಮತ್ತೊಮ್ಮೆ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡ ಅಗ್ರಹಾರ ಪ್ರದೇಶದಲ್ಲಿ ದಾಳಿ ನಡೆಸಿದ ಪೊಲೀಸರು ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೋನೇಟರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪರವಾನಗಿ ಇಲ್ಲದೆ ಸ್ಫೋಟಕ ಸಂಗ್ರಹ ಆರೋಪ

ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಆವಲಹಳ್ಳಿ ಪೊಲೀಸರು, ಕಾಡ ಅಗ್ರಹಾರ ನಿವಾಸಿ ವೆಂಕಟರಾಮ ರೆಡ್ಡಿ ಎಂಬುವರ ಬಳಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸ್ಫೋಟಕ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ.

ಕಾರ್ಯಾಚರಣೆಯಲ್ಲಿ ಒಟ್ಟು 225 ಜಿಲೆಟಿನ್ ಕಡ್ಡಿಗಳು ಹಾಗೂ 50 ಡಿಟೋನೇಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಜಮೀನಿನಲ್ಲಿರುವ ಬಂಡೆಗಳನ್ನು ಒಡೆಯುವ ಉದ್ದೇಶದಿಂದ ಈ ಸ್ಫೋಟಕಗಳನ್ನು ತರಲಾಗಿತ್ತು ಎಂದು ತಿಳಿದುಬಂದಿದೆ.

ಆದರೆ ಅಗತ್ಯ ಪರವಾನಗಿ ಇಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಇದರ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತನಿಖೆ ಮುಂದುವರಿಕೆ

ಕೇವಲ ಬಂಡೆ ಒಡೆಯುವ ಕೆಲಸಕ್ಕಾಗಿ ಜಿಲೆಟಿನ್ ಕಡ್ಡಿಗಳನ್ನು ಇರಿಸಲಾಗಿತ್ತೇ ಅಥವಾ ಬೇರೆ ಯಾವುದೇ ಉದ್ದೇಶ ಇದೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಸಂಬಂಧ ಸ್ಫೋಟಕಗಳ ಕಾಯ್ದೆ–1884ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಆವಲಹಳ್ಳಿ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮೋದಿ ಭೇಟಿ ವೇಳೆ ಕೂಡ ಪತ್ತೆಯಾಗಿದ್ದ ಜಿಲೆಟಿನ್

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ  ಅವರ ಬೆಂಗಳೂರು ಭೇಟಿಯ ಸಂದರ್ಭದಲ್ಲೂ ಆರ್ಟ್ ಆಫ್ ಲಿವಿಂಗ್ ಸಮೀಪದ ರಸ್ತೆಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಆ ಘಟನೆ ಭದ್ರತಾ ವಲಯದಲ್ಲಿ ಸಾಕಷ್ಟು ಆತಂಕ ಹಾಗೂ ಚರ್ಚೆಗೆ ಕಾರಣವಾಗಿತ್ತು.

ಈಗ ಮತ್ತೊಮ್ಮೆ ನಗರದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿರುವುದು ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ದೃಷ್ಟಿಯಿಂದ ಗಮನ ಸೆಳೆದಿದೆ.