ಮೈಸೂರು: ಇತಿಹಾಸದ ಪರಂಪರೆಯೆoದರೆ ಕಟ್ಟಡಗಳು, ಉಡುಗೆ–ತೊಡುಗೆಗಳು, ಸ್ಮಾರಕಗಳು ಹಾಗೂ ನಾಣ್ಯಗಳು ಅಷ್ಟೇ ಅಲ್ಲ, ದಾಖಲೆಗಳ ಪರಂಪರೆಯು ಇತಿಹಾಸದ ಭಾಗವೇ ಆಗಿವೆ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಪಾತ್ರಗಾರ ಇಲಾಖೆಯ ನಿರ್ದೇಶಕರಾದ ಡಾ. ಗವಿಸಿದ್ದಯ್ಯ ಅವರು ಹೇಳಿದರು.
ಇಂದು ಎಂ.ಎo.ಕೆ ಮತ್ತು ಎಸ್.ಡಿ.ಎಂ ಮಹಿಳಾ ಮಹಾ ವಿದ್ಯಾಲಯ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ವಿಭಾಗಿಯ ಪತ್ರಗಾರ ಕಛೇರಿ ಹಾಗೂ ಎಂ.ಎo.ಕೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಘಟಕ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ, ಸುವರ್ಣ ಕರ್ನಾಟಕ 50: ಸಂಭ್ರಮಾಚರಣೆ ಐತಿಹಾಸಿಕ ದಾಖಲೆಗಳ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ದಾಖಲೆಗಳು ಇತಿಹಾಸದ ಮೂಲಾಧಾರಗಳಾಗಿವೆ. ದಾಖಲೆಗಳು ನಾಡಿನ ಅಭಿವೃದ್ಧಿಗೆ ಪೂರಕವಾಗಿದ್ದು, ದಾಖಲೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
1973 ರಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಸ್ಥಾಪನೆಯಾಗಿದ್ದು, 200 ವರ್ಷಗಳಿಗೂ ಹಳೆಯ ಐತಿಹಾಸಿಕ ನಾಡಿನ ದಾಖಲೆಗಳನ್ನು ಸಂರಕ್ಷಿಸಿ, ದಾಖಲೆಗಳ ಸೇವಾ ಕಾರ್ಯವನ್ನು ಒದಗಿಸುತ್ತಿದೆ. ಸಾರ್ವಜನಿಕರಿಗೆ, ಸಂಶೋಧಕರಿಗೆ, ಸರ್ಕಾರಿ ಇಲಾಖೆಗಳಿಗೆ ಉಪಯೋಗಕ್ಕಾಗಿ ಪ್ರಕಟಿತ, ಅಪ್ರಕಟಿತ, ಕಡತಗಳು, ಖಾಸಗಿ ದಾಖಲೆಗಳು ಮತ್ತು ಧ್ವನಿ ಇತಿಹಾಸ ದಾಖಲೆಗಳನ್ನು ಸಂಗ್ರಹಿಸಿ ಮಾಹಿತಿ ಒದಗಿಸುವ ಕೆಲಸ ಮಾಡುತ್ತಿದೆ. ಈ ದಾಖಲೆಗಳು ಕರ್ನಾಟಕದ ಇತಿಹಾಸ, ಮೈಸೂರು ಸಂಸ್ಥಾನದ ಇತಿಹಾಸ, ಕರ್ನಾಟಕ ಏಕೀಕರಣ ಚಳುವಳಿ, ಸ್ವಾತಂತ್ರ್ಯ ಹೋರಾಟದ ಮಾಹಿತಿ, ಮೈಸೂರು, ಕರ್ನಾಟಕ ಆಡಳಿತಾತ್ಮಕ ಮಾಹಿತಿಗಳು, ಸೆನ್ಸಸ್ ವರದಿಗಳು, ಪ್ರಜಾಪ್ರತಿನಿದಿ ಸಭೆಯ ನಡವಳಿಗಳು, ಮೈಸೂರು ಅರಮನೆ ಆಡಳಿತಕ್ಕೆ ಸಂಬoಧಿಸಿದoತೆ ಕಡತಗಳು, ಮೈಸೂರು ಸರ್ಕಾರದ ನಡವಳಿಗಳು, ನೇಮಕಾತಿಗಳು, ಅರಣ್ಯ ಇಲಾಖೆಯ ಅಧಿಸೂಚನೆಗಳು, ಭೂಸ್ವಾದೀನ, ಜಮೀನು ಮುಂತಾದ ಕಂದಾಯ ವಿಷಯಗಳು, ಸ್ಥಳೀಯ ಆದೇಶಗಳು, ಅಂದಿನ ಮದ್ರಾಸ್ ಪ್ರಾಂತ್ಯದ ನಡವಳಿಗಳು ಹಾಗೂ ನಾಡು ನುಡಿ ಶ್ರಮಿಸಿದ ಗಣ್ಯ ವ್ಯಕ್ತಿಗಳ ನೆನಪಿನ ಅನುಭವದ ಧ್ವನಿ ಸಂಗ್ರಹ ದಾಖಲೆಗಳಂತಹ ಸುಮಾರು 1780 ರಿಂದ 2019 ರವರೆಗೆ ವಿವಿಧ ದಾಖಲೆಗಳನ್ನು ಸಂರಕ್ಷಿಸಲಾಗಿದೆ. ಪ್ರಸ್ತುತ ಇಲಾಖೆಯು ಸುಮಾರು 1.30 ಕೋಟಿ ದಾಖಲೆಗಳನ್ನು ಡಿಜಟಲೀಕರಣ ಮಾಡಿ ಇಲಾಖೆಯ ವೆಬ್ನಲ್ಲಿ ಅಳವಡಿಸಲಾಗಿದೆ. ಇದರ ಕುರಿತು www.kannadasiri.kar.nic.in ವೀಕ್ಷಣೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಾಗಾರ ಇಲಾಖೆಯಲ್ಲೇ ಹಳೆಯ ಪತ್ರವಾದ ನಾಲ್ಕನೇ ಆಂಗ್ಲೋ–ಮೈಸೂರು ಯುದ್ಧದ ಶ್ರೀರಂಗ ಪಟ್ಟಣ ಒಪ್ಪಂದ ಪ್ರತಿ, ಮೈಸೂರು ರಾಜರ ಮತ್ತು ದಿವಾನರ ಸಹಿಗಳು ಹೀಗೆ ಹಲವಾರು ಇಲಾಖೆಗಳ ದಾಖಲಾತಿಗಳು ಲಭ್ಯವಿದೆ. ಛಾಯಾ ಚಿತ್ರಗಳ ಪ್ರದರ್ಶನದಲ್ಲಿ ಮೈಸೂರು ಸಂಸ್ಥಾನದ ಆದೇಶಗಳು, ಪತ್ರ ವ್ಯವಹಾರಗಳು, ಸುತ್ತೋಲೆಗಳು, ಮೈಸೂರು ಮಹಾರಾಜರು ಮತ್ತು ದಿವಾನರ ಛಾಯಾ ಚಿತ್ರಗಳು, ಆಹ್ವಾನ ಪತ್ರಗಳು, ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ಛಾಯಾ ಚಿತ್ರಗಳು ಸೇರಿದಂತೆ 120 ಕ್ಕೂ ಹೆಚ್ಚಿನ ದಾಖಲೆಗಳು ಮತ್ತು ಛಾಯಾ ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಪಾತ್ರಗಾರ ಇಲಾಖೆಯು, ಸರ್ಕಾರ ಅಧಿಕೃತವಾಗಿ ರಾಜ್ಯಪಾಲರ ಅನುಮತಿಯ ಸಹಿಯೊಂದಿಗೆ ಹೊರಡಿಸುವ ಗೆಜೆಟ್ಗಳನ್ನು ಸಂಕ್ಷಿಸುವ, ಮಾಹಿತಿಯನ್ನು ಒದಗಿಸುವ ಕೆಲಸವನ್ನು ಮಾಡುತ್ತಿದೆ. 1399 ರಲ್ಲಿ ಪ್ರಾರಂಭವಾದ ಮೈಸೂರು ಸಂಸ್ಥಾನ, 25 ಮಹಾರಾಜರು ಆಳ್ವಿಕೆ ಮಾಡಿದ ರಾಜರ ದಾಖಲೆಗಳಿವೆ. ಮೈಸೂರು ಮಹಾರಾಜರ ವಂಶಾವಳಿಯ ಭಾಗ-1, ಭಾಗ-2 ರಾಜರ ಆಡಳಿತದ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ಒದಗಿಸುತ್ತವೆ. ಹೀಗೆ ಐತಿಹಾಸಿಕ ದಾಖಲೆಗಳನ್ನು ಇಡಲಾಗಿದೆ ಎಂದರು.
ಗಾoಧೀಜಿಯವರು ಮಹಾರಾಜರ ಆಡಳಿತ ಅವಧಿಯಲ್ಲಿ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೈಸೂರಿನ ಸರ್ವಾಂಗೀಣ ಬೆಳವಣಿಗೆಯ ಮಹಾಪೂರವೇ ಆಗುತ್ತಿದೆ ಎಂಬುದನ್ನ ಮನಗಂಡ ಗಾಂಧೀಜಿಯವರು ಮೈಸೂರನ್ನು ರಾಮರಾಜ್ಯ ಎಂದು ಕರೆದರು. ಇದರ ಬಗ್ಗೆ ಮಾಹಿತಿಯೂ ಸಹ ನಮ್ಮ ಇಲಾಖೆಯಲ್ಲಿ ಒದಗಿಸುವ ಕೆಲಸ ಮಾಡುತ್ತಿದೆ ಎಂದರು.
ದಾಖಲೆಗಳು ಕೇವಲ ಕಾಲಪತ್ರಗಳಲ್ಲ, ಅವು ನಮ್ಮ ಇತಿಹಾಸವಾಗಿದೆ. ‘ಇತಿಹಾಸವನ್ನು ಮರೆತವರು, ಇತಿಹಾಸವನ್ನು ಸೃಷ್ಟಿಸಲಾರ’ ಎಂಬoತೆ ದಾಖಲೆಗಳು ನಮ್ಮ ಪರಂಪರೆಯಾಗಿದೆ. ಈ ರೀತಿಯ ದಾಖಲೆಗಳು ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಮೈಸೂರು ಹೀಗಿತ್ತು ಎನ್ನುವ ಪೂರ್ಣ ಚಿತ್ರಣವನ್ನು ನೀಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ರೈತರ ಭೂಮಿಗೆ ಸಂಬoಧ ಪಟ್ಟಂತೆ ಪಹಣಿ, ಆರ್.ಟಿ.ಸಿ ಮುಂತಾದವುಗಳ ಕುರಿತು ನಮ್ಮ ಇಲಾಖೆಯಲ್ಲಿ ಮಾಹಿತಿ ಪಡೆಯಬಹುದು. ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದರು.
ಮುಖ್ಯ ಅತಿಥಿಗಳಾದ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ಪ್ರೀತಿ ಶುಭಚಂದ್ರ ಅವರು ಮಾತನಾಡಿ, ಅಲ್ಲಮ ಪ್ರಭುಗಳ ವಚನದ ಸಾರಾಂಶವಾದ “ಹಿಂದಿನ ಹೆಜ್ಜೆ ಅರಿಯಾಲಾಗದೆ, ಮುಂದಿನ ಹೆಜ್ಜೆ ಇಡಲಾಗದು” ಎಂಬoತೆ, ಭೂತಕಾಲದ ಆಗು-ಹೋಗುಗಳನ್ನು ತಿಳಿದುಕೊಳ್ಳದೇ, ವರ್ತಮಾನದ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರಿಗೂ ಚರಿತ್ರೆಯ ಅರಿವು ಬಹಳ ಮುಖ್ಯ ಎಂದು ಹೇಳಿದರು.
ಜ್ಞಾನದ ಶಾಖೆಯನ್ನು ವಿಸ್ತರಿಸಿಕೊಳ್ಳಲು ಇತಿಹಾಸದ ಪ್ರಜ್ಞೆ ಪ್ರತಿಯೊಬ್ಬರಿಗೂ ಮುಖ್ಯ. ರಾಜ್ಯ ಪಾತ್ರಗಾರ ಇಲಾಖೆಯಲ್ಲಿ ನಾನಾ ಬಗೆಯ ಎಲ್ಲಾ ಮಾಹಿತಿಗಳು ಲಭ್ಯವಿದ್ದು, ಇವುಗಳು ಮುಂದಿನ ಫಿಳಿಗೆಯ ಚರಿತ್ರೆಯ ಆಕರಗಳಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಎo.ಕೆ ಮತ್ತು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಭಾರತಿ ಎನ್. ಅವರು ಮಾತನಾಡಿ, ಪತ್ರಾಗಾರ ಇಲಾಖೆಯಲ್ಲಿ ಐತಿಹಾಸಿಕ ದಾಖಲೆಗಳು ಪ್ರಾಥಮಿಕ ಆಕರಗಳಾಗಿವೆ. ಸಂಶೋಧಕರು ಇವುಗಳನ್ನು ಬಳಸಿಕೊಳ್ಳಬಹುದಾಗಿದ್ದು, ಇತಿಹಾಸದ ನೈಜ್ಯತೆ ಪರಿಶೀಲನೆಗೆ ಈ ದಾಖಲೆಗಳು ಸಹಕಾರಿವಾಗಿವೆ. ದಾಖಲೆಗಳ ಸಂರಕ್ಷಣೆ ಮತ್ತು ನಿರ್ವಹಣೆ ಬಹಳ ಅತ್ಯಮೂಲ್ಯವಾಗಿದೆ ಎಂದರು.
ಕರ್ನಾಟಕ ರಾಜ್ಯದ ಇತಿಹಾಸ ವ್ಯಾಪಾಕವಾದುದ್ದು. ಗಾಂಧೀಜಿಯವರು ಕರ್ನಾಟಕಕ್ಕೆ ಭೇಟಿ ನೀಡಿದ ದಾಖಲೆಗಳು ಪತ್ರಾಗಾರದಲ್ಲಿವೆ. ಖಾಸಗಿ ಪತ್ರಿಕೆಗಳಿಂದ ಹಿಂದಿನ ಕಾಲದ ಐತಿಹಾಸಿಕ ಘಟನೆಗಳನ್ನು ಪತ್ರಗಾರದಲ್ಲಿರುವ ಪತ್ರಿಕೆಗಳಲ್ಲಿ ಓದಿ ತಿಳಿಯಬಹುದಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ವಿಭಾಗೀಯ ಪತ್ರಾಗಾರ ಕಛೇರಿಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ಹೆಚ್.ಎಲ್., ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಯನ ಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿನೋದ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.