ಮೈಸೂರು: ಕೆ.ಆರ್. ವೃತ್ತದಲ್ಲಿರುವ ಇತಿಹಾಸ ಪ್ರಸಿದ್ಧ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಮೇಲೆ ಹತ್ತಿ, ವ್ಯಕ್ತಿಯೊಬ್ಬ ಬಾಯಿಗೆ ಸಿಗರೇಟ್ ಇಡುವ ಮೂಲಕ ವಿಕೃತಿ ಮೆರೆದಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹುಚ್ಚಾಟದ ಘಟನೆ ಇಂದು ಬೆಳಗ್ಗೆ ಮೈಸೂರಿನ ಕೆ.ಆರ್.ವೃತ್ತದಲ್ಲಿ ಸಂಭವಿಸಿದ್ದು, ಒಂದು ಕ್ಷಣದ ಆತಂಕ ಸೃಷ್ಟಿಸಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಮೇಲೆ ಹತ್ತಿದ ವ್ಯಕ್ತಿ, ಪ್ರತಿಮೆಯ ಬಾಯಿಗೆ ಸಿಗರೇಟ್ ಇಟ್ಟು ಕುಳಿತುಕೊಂಡಿದ್ದ. ಈ ದೃಶ್ಯವನ್ನು ಕಂಡು ಸಾರ್ವಜನಿಕರು ಆಘಾತಕ್ಕೊಳಗಾದರು. ಸ್ಥಳಕ್ಕೆ ಬರುವವರ ಸಂಖ್ಯೆಯು ಏರುತ್ತಿದ್ದಂತೆ, ಅಪರಿಚಿತ ವ್ಯಕ್ತಿ ಪ್ರತಿಮೆ ಇಳಿದು ಎಸ್ಕೇಪ್ ಆಗಿದ್ದಾನೆ.
ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ, ಸಾರ್ವಜನಿಕರಿಂದ ಸೆರೆಹಿಡಿಯಲ್ಪಟ್ಟ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿದೆ. ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಒಡೆಯರ್ ಅವರ ಖ್ಯಾತಿಗೆ ಧಕ್ಕೆ ತಂದ ಈ ಕೃತ್ಯವನ್ನು ಖಂಡಿಸಿದ್ದಾರೆ.
ವ್ಯಕ್ತಿಯ ಚಲನವಲನದ ವಿಡಿಯೋಗಳ ಆಧಾರದ ಮೇಲೆ ದೇವರಾಜ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಯ ಪತ್ತೆಗಾಗಿ ಬಲೆ ಬೀಸಲಾಗಿದೆ.














