ಬೆಂಗಳೂರು: ನಗರದ ಮುನೇಶ್ವರನಗರದಲ್ಲಿ ಮನೆ ಬಾಡಿಗೆ ಕೇಳಿದ್ದಕ್ಕೆ ಮಹಿಳೆಯನ್ನು ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶ್ರೀದೇವಿ ಗಾಯಗೊಂಡ ಮಹಿಳೆ. ಸದ್ದಾಂ ಎಂಬಾತ ಚಾಕುವಿನಿಂದ ಇರಿದವ.
ಹಲ್ಲೆಗೊಳಗಾದ ಶ್ರೀದೇವಿ ಅವರು ಘಟನೆ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕೊಲೆಯತ್ನದ ಸೆಕ್ಷನ್ ದಾಖಲಿಸದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗುತ್ತಿದೆ.
ಫಯಾಜ್ ಎಂಬುವವರ ಕಟ್ಟಡದಲ್ಲೇ ಶ್ರೀದೇವಿ ಬಾಡಿಗೆಗೆ ಇದ್ದರು. ಫಯಾಜ್ ಕುಟುಂಬ ವಿದೇಶದಲ್ಲಿರುವುದರಿಂದ ಶ್ರೀದೇವಿಗೆ ಉಸ್ತುವಾರಿ ನೀಡಿದ್ದರು. ಹಾಗಾಗಿ ಇಡೀ ಕಟ್ಟಡದ ಜವಾಬ್ದಾರಿಯನ್ನು ಶ್ರೀದೇವಿ ನೋಡಿಕೊಂಡಿದ್ದರು. ಬಾಡಿಗೆ ಹಣ ಪಡೆದು ವಿದೇಶದಲ್ಲಿದ್ದ ಫಯಾಜ್ ಗೆ ನೀಡುತ್ತಿದ್ದರು. ಅದರಂತೆ ಶ್ರೀದೇವಿ ವಾಸವಾಗಿದ್ದ ಬಿಲ್ಡಿಂಗ್ ನಲ್ಲೇ ವಾಸವಾಗಿದ್ದ ನಜೀರ್ ಕುಟುಂಬ ಕಳೆದ 3 ತಿಂಗಳಿಂದ ಬಾಡಿಗೆ ನೀಡಿರಲಿಲ್ಲ. ಈ ಹಿನ್ನೆಲೆ ಜೋರು ಧ್ವನಿಯಲ್ಲಿ ಮನೆ ಬಾಡಿಗೆ ನೀಡುವಂತೆ ಕೇಳಿದ್ದರು. ಇದೇ ವಿಚಾರವನ್ನು ನಜೀರ್ ತನ್ನ ಮಗ ಸದ್ದಾಂ ಬಳಿ ಹೇಳಿದ್ದ.
ಆಕ್ರೋಶದಿಂದ ಶ್ರೀದೇವಿ ಮನೆ ಬಳಿ ಹೋಗಿ ಸದ್ದಾಂ ಕಿರಿಕ್ ಮಾಡಿದ್ದಾನೆ. ಈ ವೇಳೆ ಚಾಕುವಿನಿಂದ ಮುಖ, ಕೈ ಕೊಯ್ದು ಹಲ್ಲೆ ನಡೆಸಿದ್ದಾನೆ.