ಮೈಸೂರು: 30 ವರ್ಷಗಳ ಮೈಸೂರು ಕಮಿಷನರೇಟ್ ಇತಿಹಾಸದಲ್ಲಿ ಒಂದೇ ನಗರದಲ್ಲಿ ಇದೇ ಮೊದಲ ಬಾರಿಗೆ 700 ಮಂದಿ ಪೊಲೀಸರನ್ನು ವರ್ಗಾವಣೆ ಮಾಡುವ ಮೂಲಕ ಮೈಸೂರು ನಗರ ಕಮೀಷನರ್ ಸೀಮಾ ಲಾಟ್ಕರ್ ತಮ್ಮ ದಕ್ಷತೆಯನ್ನು ಮೆರೆದಿದ್ದಾರೆ.
ತಮ್ಮ ದಕ್ಷತೆಗೆ ಹೆಸರಾದ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಒಂದೇ ದಿನ 465 ಪೊಲೀಸ್ ಕಾನ್ಸ್ ಟೇಬಲ್, 182 ಹೆಡ್ ಕಾನ್ಸ್ ಟೇಬಲ್ ಹಾಗೂ 16 ಎಎಸ್ ಐ ಸೇರಿದಂತೆ 700 ಪೊಲೀಸರನ್ನು ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಮೈಸೂರು ಪೊಲೀಸ್ ಇಲಾಖೆಯಲ್ಲಿ ಆಡಳಿತಕ್ಕೆ ವೇಗ ನೀಡಿದ್ದಾರೆ.
ಒಂದೇ ದಿನದಲ್ಲಿ ಆದೇಶ ಹೊರಡಿಸಿ, ತ್ವರಿತವಾಗಿ ಜಾರಿಗಳಿಸಿದ್ದಾರೆ. ಅಲ್ಲದೇ ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ಹಾಕಿಸಬಾರದೆಂಬ ಕಾರಣಕ್ಕೆ ಅದೇ ದಿನ ವರದಿ ಮಾಡಿಕೊಂಡು, ಜಾಯ್ನಿಂಗ್ ಆಗುವಂತೆ ಮಾಡಿದ್ದಾರೆ.
ಕಳೆದ 5 ವರ್ಷಗಳಿಂದ ಯಾರ್ಯಾರು ಒಂದೊಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರೋ ಆ ಅಧಿಕಾರಿಗಳನ್ನು ಹಾಗೂ 10-12 ವರ್ಷಗಳಿಂದ ಬೇರೆಡೆ ವರ್ಗಾವಣೆಯಾಗದೇ ಮೈಸೂರಿನಲ್ಲೇ ನೆಲೆ ನಿಂತು ಸ್ವಂತ ಮನೆಯನ್ನು ಮಾಡಿಕೊಂಡಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ತಂದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 2011ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ಸೀಮಾ ಲಾಟ್ಕರ್, ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿದ್ದು, ಮೈಸೂರು ನಗರದ ಪ್ರಥಮ ಮಹಿಳಾ ಪೊಲೀಸ್ ಆಯುಕ್ತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದುವರೆಗೆ ನಗರ ಪೊಲೀಸ್ ಆಯುಕ್ತರಾಗಿ ಪುರುಷ ಅಧಿಕಾರಿಗಳೇ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಗೆ ಮಣೆ ಹಾಕಿದ್ದು, ಅದಕ್ಕೆ ಸಾರ್ಥಕವೆಂಬಂತೆ ಹಲವು ವರ್ಷಗಳಿಂದ ಒಂದೇ ಕಡೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆಡಳಿತ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿದ್ದಾರೆ.