ಮನೆ ಅಪರಾಧ ಎರಡು ಮಕ್ಕಳ ತಾಯಿ, ಪ್ರಿಯಕರನ ಸಹಾಯದಿಂದ ಪತಿಯನ್ನೇ ಕೊಲೆ ಮಾಡಿದ ಪತ್ನಿ!

ಎರಡು ಮಕ್ಕಳ ತಾಯಿ, ಪ್ರಿಯಕರನ ಸಹಾಯದಿಂದ ಪತಿಯನ್ನೇ ಕೊಲೆ ಮಾಡಿದ ಪತ್ನಿ!

0

ಚಿಕ್ಕಮಗಳೂರು: ಎನ್‌ಆರ್‌ಪುರ ತಾಲ್ಲೂಕಿನ ಕರಗುಂದ ಬಳಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನೇ ಹತ್ಯೆ ಮಾಡಿದ ಘೋರ ಘಟನೆ ಬೆಳಕಿಗೆ ಬಂದಿದೆ. ಕಳೆದ ಶನಿವಾರ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾದ ಶವದ ಹಿಂದೆ ಪತ್ನಿಯದೇ ಕೊಲೆ ಸಂಚು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಎನ್‌ಆರ್‌ಪುರ ಪಟ್ಟಣದ ಸುದರ್ಶನ್ ಎಂದು ಗುರುತಿಸಲಾಗಿದೆ. ಈತನ ಪತ್ನಿ ಕಮಲ, ಆಕೆಯ ಪ್ರಿಯಕರ ಎಸ್. ಶಿವರಾಜ್, ಜೊತೆಗೆ ಶಿವರಾಜ್‌ನ ಇಬ್ಬರು ಸ್ನೇಹಿತರು ಕೂಡ ಈ ಕೊಲೆಗೆ ಸಂಬಂಧಪಟ್ಟಿದ್ದಾರೆ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹತ್ಯೆಗೂ ಮುನ್ನ ಸುದರ್ಶನ್‌ಗೆ ಮದ್ಯದೊಂದಿಗೆ ನಿದ್ರೆ ಮಾತ್ರೆ ನೀಡಲಾಗಿತ್ತು. ಪ್ರಜ್ಞೆ ತಪ್ಪಿದ ಬಳಿಕ ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದ್ದು, ಶವವನ್ನು ಕರಗುಂದ ಬಸ್ ನಿಲ್ದಾಣದ ಸಮೀಪ ಎಸೆದು ಅಪಘಾತದ ರೂಪವನ್ನಿತ್ತಿದ್ದರು.

10 ವರ್ಷಗಳ ಹಿಂದೆ ಕಮಲ ಮತ್ತು ಸುದರ್ಶನ್ ವಿವಾಹವಾಗಿದ್ದು, ಇಬ್ಬರು ಮಕ್ಕಳಾದ ಮೇಲೂ ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆಯಿದ್ದು, ಕಮಲ ಮತ್ತು ಶಿವರಾಜ್ ನಡುವೆ ಪ್ರೇಮ ಸಂಬಂಧ ಬೆಳೆದಿತ್ತು. ಪತಿಯು ಈ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಕಾರಣ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆಂದು ತಿಳಿದುಬಂದಿದೆ.

ಎನ್‌ಆರ್‌ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2 ತನಿಖಾ ತಂಡ ರಚನೆ ಮಾಡಿ, ಪತ್ನಿ ಹಾಗೂ ಪ್ರಿಯಕರ ಸೇರಿ ನಾಲ್ವರ ಬಂಧನ ಮಾಡಲಾಗಿದ್ದು, ಆರೋಪಿಗಳಿಂದ ಒಂದು ಕಾರು ವಶಕ್ಕೆ ಪಡೆಯಲಾಗಿದೆ. ತನಿಖೆ ಇನ್ನೂ ಮುಂದುವರೆದಿದೆ