ನಾಟಕೋತ್ಸವ ಯಶಸ್ಸಿಗೆ ಇಲಾಖೆಗಳು ಕೈಜೋಡಿಸಿ: ಜಿಲ್ಲಾಧಿಕಾರಿ
ಮೈಸೂರು:
ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಇವ ನಮ್ಮವ, ಇವ ನಮ್ಮವ ಎಂಬ ಉಕ್ತಿಯ ಶೀರ್ಷಿಕೆಯಡಿ ಹೆಸರಾಂತ ಬಹುರೂಪಿ ನಾಟಕೋತ್ಸವ ಮಾರ್ಚ್ 6 ರಿಂದ 11 ರವರಗೆ ರಂಗಾಯಣದಲ್ಲಿ ಜರುಗಲಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ನಾಟಕೋತ್ಸವದ ಯಶಸ್ಸಿಗೆ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬಹುರೂಪಿ ನಾಟಕೋತ್ಸವ ಪೂರ್ವಭಾವಿ ಸಭೆಯಲ್ಲಿ ನಿರ್ದೇಶನ ನೀಡಿದ ಅವರು, ಬಹುರೂಪಿ ನಾಟಕೋತ್ಸವ ಜೈಪುರ ಉತ್ಸವ, ಬೆಂಗಳೂರು ಹಬ್ಬದ ರೀತಿಯಲ್ಲಿ ಬ್ರಾಂಡಿಂಗ್ ಆಗಬೇಕು ಎಂದರು.
ಮಾರ್ಚ್ 6 ರಂದು ಜಾನಪದೋತ್ಸವ ಉಧ್ಘಾಟನೆಗೂಳ್ಳಲಿದ್ದು, 7 ರಿಂದ ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕ ಪ್ರದರ್ಶನಕ್ಕೆ 118 ಅರ್ಜಿಗಳು ಸಲ್ಲಿಕೆಯಾಗಿದ್ದು ಸಮಿತಿಯು 18 ನಾಟಕಗಳನ್ನು ಆಯ್ಕೆ ಮಾಡಿದೆ.
ಸಾಮಾಜಿಕ ಸಮಸ್ಯೆಗಳಿಗೆ ಒತ್ತು ನೀಡುವುದರೊಂದಿಗೆ, ಪ್ರಯೋಗಶೀಲ ನಾಟಕಗಳಿಗೆ ಎಲ್ಲಾ ವಯೋಮಾನದವರಿಗೆ ಸಲ್ಲುವ ನಾಟಕಗಳು ಆಯ್ಕೆಯಾಗಿದ್ದು, ಕನ್ನಡ ಹಾಗೂ ಬಹುಭಾಷಾ ನಾಟಕಗಳು ಇರಲಿವೆ. ಇದರೊಂದಿಗೆ ರಾಷ್ಟ್ರೀಯ ವಿಚಾರ ಸಂಕಿರಣಗಳು ಜರುಗಲಿದ್ದು ಕಲಾತ್ಮಕ ಹಾಗೂ ವಿದ್ವತ್ಪೂರ್ಣ ಚಿಂತನೆಗೆ ಹಚ್ಚುವ ವಿಷಯಗಳಿರಲಿ ಎಂದರು.
ನಾಟಕೋತ್ಸವಕ್ಕೆ ಗಣ್ಯರು, ಚಿಂತಕರು ಆಗಮಿಸುವುದರಿಂದ ಅವರುಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿ, ಪಾಲಿಕೆಯವರು ಕಾರ್ಯಕ್ರಮ ನಡೆಯುವ ಕಲಾಮಂದಿರ ಸುತ್ತಮುತ್ತಲಿನ ಸ್ವಚ್ಚತೆಗೆ ಗಮನ ಹರಿಸಿ, ಸಾವಿರಾರು ಸಂಖ್ಯೆ ಯಲ್ಲಿ ಜನ ಸೇರುವುದರಿಂದ ಟ್ರಾಪಿಕ್ ಸಮಸ್ಯೆ ಆಗದಂತೆ ಹಾಗೂ ಸಾರಿಗೆ ಇಲಾಖೆಯವರು ಮುಖ್ಯ ಸ್ಥಳಗಳಿಗೆ ಬಸ್ ಸಂಚಾರ ವ್ಯವಸ್ಥೆ ಇರುವಂತೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿ ಎಂದರು
ರಂಗಾಯಣದ ಉಪನಿರ್ದೇಶಕರಾದ ನಿರ್ಮಲಾ ಮಠಪತಿ ಮಾಹಿತಿ ನೀಡಿ ನಾಟಕೋತ್ಸವ 4 ಸ್ಥಳಗಳಲ್ಲಿ ನಡೆಯಲಿದೆ 5 ದಿನಗಳ ಚಲನಚಿತ್ರೋತ್ಸವ ರಾಷ್ಟ್ರೀಯ ವಿಚಾರ ಸಂಕಿರಣ, ಕರಕುಶಲ ವಸ್ತು ಪ್ರದರ್ಶನ, ಕರಕುಶಲ ಪ್ರಾತ್ಯಕ್ಷಿಕೆ, ಚಿತ್ರಕಲಾ ಪ್ರದರ್ಶನ, ಚಾರಿತ್ರಿಕ ದಾಖಲೆಗಳ ಪ್ರದರಶನ, ಜಾನಪದ ಕಲಾ ಪ್ರದರ್ಶನ ಹಾಗೂ ರಂಗ ಗೀತೆಗಳ ಗಾಯನ ಇರಲಿದೆ ಎಂದರು.
ಇದೇ ಸಂದರ್ಭದಲ್ಲಿ ಬಹುರೂಪಿ ನಾಟಕೋತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಕನ್ನಡ ಸಂಸ್ಕ್ರತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ,ಪಾಲಿಕೆ ಉಪ ಆಯುಕ್ತ ಸೋಮಶೇಖರ್ ,ತೋಟಗಾರಿಕೆ ಇಲಾಖೆ ಉಪನರ್ದೇಶಕ ಮಂಜುನಾಥ್,ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.