ಕಾಠ್ಮಂಡು: ಐವರು ವಿದೇಶಿಯರು ಸೇರಿ ಆರು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರೊಂದು ನಾಪತ್ತೆಯಾದ ಘಟನೆ ಸೋಲುಖುಂಬು ಮತ್ತು ಕಾಠ್ಮಂಡು ನಡುವೆ ಮಂಗಳವಾರ ಬೆಳಗ್ಗೆ ನಡೆದಿದೆ.
ಬೆಳಗ್ಗೆ 10.15ರ ಸುಮಾರಿಗೆ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿದೆ ಎಂದು ವರದಿ ತಿಳಿಸಿದೆ.
ಸೋಲುಖುಂಬುವಿನಲ್ಲಿ ಸುರ್ಕಿಯಿಂದ ಹೊರಟ ಮನಂಗ್ ಏರ್ ಹೆಲಿಕಾಪ್ಟರ್ 15 ನಿಮಿಷಗಳ ನಂತರ ಸಂಪರ್ಕವಿಲ್ಲದೆ ಹೋಯಿತು ಎಂದು ಕಾಠ್ಮಂಡು ಪೋಸ್ಟ್ ವರದಿ ಮಾಡಿದೆ.
ಹೆಲಿಕಾಪ್ಟರ್ ಐವರು ವಿದೇಶಿ ಪ್ರವಾಸಿಗರನ್ನು ಹೊತ್ತು ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಗೆ ವಿಹಾರ ಮಾಡಿ ಮಂಗಳವಾರ ಬೆಳಗ್ಗೆ ರಾಜಧಾನಿ ಕಠ್ಮಂಡುವಿಗೆ ಮರಳುತ್ತಿತ್ತು. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ನ ಹಾರಾಟದ ಮಾರ್ಗವನ್ನು ಬದಲಾಯಿಸಬೇಕಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿ ಸಾಗರ್ ಕಡೆಲ್ ತಿಳಿಸಿದ್ದಾರೆ.
ಹೆಲಿಕಾಪ್ಟರ್ ನಾಪತ್ತೆಯಾಗಿರುವ ಸಮೀಪದ ಪ್ರದೇಶಗಳಲ್ಲಿ ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕ್ಯಾಪ್ಟನ್ ಚೆಟ್ ಗುರುಂಗ್ ಅವರು ಹೆಲಿಕಾಪ್ಟರ್ ನ ಪೈಲಟ್ ಆಗಿದ್ದು, ಪತ್ತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ.