ಲಕ್ನೋ: ವ್ಯಕ್ತಿಯೊಬ್ಬ ಮತದಾನ ಮಾಡುವಾಗ ಬಿಜೆಪಿ ಅಭ್ಯರ್ಥಿಗೆ ಹಲವು ಬಾರಿ ಮತದಾನ ಮಾಡಿದ್ದು, ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದು ವೈರಲ್ ಆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೃತ್ಯವೆಸಗಿದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ರಾಜನ್ ಸಿಂಗ್ ಎಂದು ಗುರುತಿಸಲಾಗಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಎಕ್ಸ್ ನಲ್ಲಿ ವಿಡಿಯೋ ಹಂಚಿ ಆಗ್ರಹಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಯಿತು.
ಎರಡು ನಿಮಿಷಗಳ ಅವಧಿಯ ವೀಡಿಯೊದಲ್ಲಿ, ಮತದಾರನು ಬಿಜೆಪಿ ಅಭ್ಯರ್ಥಿ ಮುಖೇಶ್ ರಜಪೂತ್ ಅವರಿಗೆ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ (ಇವಿಎಂ) ಕನಿಷ್ಠ 8 ಬಾರಿ ಮತ ಚಲಾಯಿಸುವುದನ್ನು ಕಾಣಬಹುದು.
ಮುಖೇಶ್ ರಜಪೂತ್ ಅವರು ಉತ್ತರ ಪ್ರದೇಶದ ಫರೂಕಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಬುದು ಗಮನಾರ್ಹ.
ವಿಡಿಯೋ ಬಹಿರಂಗವಾದ ನಂತರ, ಎಆರ್ ಓ ಪ್ರತೀತ್ ತ್ರಿಪಾಠಿ ಅವರ ದೂರಿನ ಆಧಾರದ ಮೇಲೆ ನಯಾ ಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸಂಬಂಧಪಟ್ಟ ಜಿಲ್ಲಾ ಚುನಾವಣಾ ಅಧಿಕಾರಿಗೆ ತ್ವರಿತ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಘಟನೆ ನಡೆದಾಗ ಮತಗಟ್ಟೆಯಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಿ ಶಿಸ್ತು ಕ್ರಮ ಜರುಗಿಸುವಂತೆ ಚುನಾವಣಾ ಸಮಿತಿ ಅಧಿಕಾರಿಗಳಿಗೆ ಸೂಚಿಸಿದೆ.