ಹರಿಯಾಣ: ಸೈಬರ್ ಕೆಫೆ ಮಾಲೀಕರೊಬ್ಬರ ವಿರುದ್ಧ ನಕಲಿ ಕೇಸ್ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ನಿವೃತ್ತ ಪೊಲೀಸರು ಹಾಗೂ ಸೇವೆಯಲ್ಲಿರುವ ಒಬ್ಬ ಪೊಲೀಸ್ ಅಧಿಕಾರಿ ಸೇರಿ ನಾಲ್ವರಿಗೆ ಹರಿಯಾಣದ ಗುರುಗ್ರಾಮ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.
ಘಟನೆ ವಿವರ: 2009ರಲ್ಲಿ ಗುರುಗ್ರಾಮದ ರಾಜೀವ್ ನಗರದಲ್ಲಿರುವ ಹಂಸರಾಜ್ ರಾಥಿ ಎಂಬುವರ ಕೆಫೆ ಮೇಲೆ ಮತದಾರರ ನಕಲಿ ಗುರುತಿನ ಚೀಟಿ ಪ್ರಕರಣಕ್ಕೆ ದಾಳಿ ನಡೆಸಿ, ಕೇಸ್ ದಾಖಲಿಸಿದ್ದರು. ಆದರೆ, ಇದು ನಕಲಿ ಕೇಸ್ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಕ್ರೈಂ ಬ್ರ್ಯಾಂಚ್‌ನ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ರಾಮ್ ದಯಾಳ್ ಅವರಿಗೆ ಐದು ವರ್ಷ ಜೈಲು ಹಾಗೂ 40 ಸಾವಿರ ರೂ. ದಂಡ ವಿಧಿಸಲಾಗಿದೆ.
ಪೇದೆಗಳಾದ ರಾಜೇಶ್, ಸುನಿಲ್ ಹಾಗೂ ವಿನೋದ್ ಎಂಬುವವರಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ತಲಾ 40 ಸಾವಿರ ರೂ. ದಂಡ ವಿಧಿಸಲಾಗಿದೆ. ಸೈಬರ್ ಕೆಫೆ ಮಾಲೀಕನ ಮೇಲೆ ಕೇಸ್ ದಾಖಲಿಸುವ ಮೊದಲು ಪೊಲೀಸರು ಮಾಲೀಕನಿಗೆ ಬೆದರಿಕೆ ಹಾಕಿದ್ದರು. ಒಂದು ಲಕ್ಷ ರೂ. ಲಂಚ ನೀಡಬೇಕು ಎಂದು ಒತ್ತಾಯಿಸಿದ್ದರು.
ಆದರೆ, ಮಾಲೀಕನು ಲಂಚ ನೀಡದ ಕಾರಣ ಕೆಫೆ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿದ್ದರು. ಜೈಲು ಸೇರಿ, ಜಾಮೀನು ಪಡೆದು ಹೊರಗೆ ಬಂದಿದ್ದ ಮಾಲೀಕ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.














