ಜಕಾರ್ತ: ಶುಕ್ರವಾರ ಬೆಳಗ್ಗೆ ಪೂರ್ವ ಇಂಡೋನೇಷ್ಯಾದ ಉತ್ತರ ಮಲುಕು ಎಂಬಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಸಾವು–ನೋವು ಅಥವಾ ಹಾನಿ ಸಂಭವಿಸಿಲ್ಲ.
ಭೂಕಂಪವು ಶುಕ್ರವಾರ ನಸುಕಿನ 03:02ರ ವೇಳೆಯಲ್ಲಿ ಸಂಭವಿಸಿದೆ. ಅದರ ಕೇಂದ್ರಬಿಂದುವನ್ನು ಮೊರೊಟೈ ಜಿಲ್ಲೆಯ ವಾಯುವ್ಯಕ್ಕೆ 133 ಕಿ.ಮೀ ದೂರದಲ್ಲಿ, ಸಮುದ್ರತಳದ 112 ಕಿ.ಮೀ ಆಳದಲ್ಲಿ ಗುರುತು ಮಾಡಲಾಗಿದೆ. ಆದರೆ, ಸುನಾಮಿ ಪರಿಸ್ಥಿತಿ ಸೃಷ್ಟಿಯಾಗಿಲ್ಲ ಎಂದು ದೇಶದ ಹವಾಮಾನ ಇಲಾಖೆ ಹೇಳಿದೆ.
ಭೂಕಂಪದ ಪರಿಣಾಮವಾಗಿ ಉತ್ತರ ಸುಲವೆಸಿ ಪ್ರಾಂತ್ಯದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದಿಂದ ಕಟ್ಟಡಗಳಿಗೆ ಹಾನಿಯಾದ ನಿದರ್ಶನಗಳಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವಕ್ತಾರ ಅಬ್ದುಲ್ ಮುಹಾರಿ ಹೇಳಿದ್ದಾರೆ.
‘ಪೆಸಿಫಿಕ್ ರಿಂಗ್ ಆಫ್ ಫೈರ್’ ಎಂಬ ದುರ್ಬಲ, ಭೂಕಂಪ-ಪೀಡಿತ ವಲಯದಲ್ಲಿ ಇಂಡೋನೇಷ್ಯಾ ಇದೆ. ಹೀಗಾಗಿ ಇಲ್ಲಿ ಆಗಾಗ ಭೂಕಂಪ ಸಂಭವಿಸುವುದೂ ಅಲ್ಲದೇ, ಸುನಾಮಿ ಭೀತಿ ಎದುರಾಗುತ್ತಿರುತ್ತದೆ.