ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತ್ತೊಂದು ಮನುಷ್ಯತ್ವಕ್ಕೆ ಧಕ್ಕೆ ತರುವ ಘಟನೆ ವರದಿಯಾಗಿದೆ. ಈ ಬಾರಿ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು, ಕೇವಲ 6 ವರ್ಷದ ಬಾಲಕಿ ಮೇಲೆ ಮಸೀದಿ ಕೊಠಡಿಯಲ್ಲಿ ಅತ್ಯಾಚಾರ ನಡೆದಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ನಗರದ ಶಮ್ಸ್ ಮಸೀದಿಯ ಒಂದು ಕೊಠಡಿಯಲ್ಲಿ 55 ವರ್ಷದ ವ್ಯಕ್ತಿಯೊಬ್ಬನು ಕೃತ್ಯ ಎಸಗಿದ್ದಾನೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನಂತೆ, ಆರೋಪಿ ಮಹಪ್ಯೂಸ್ ಎಂಬಾತ ಮಸೀದಿ ಒಳಗಿನ ಕೊಠಡಿಗೆ ಬಾಲಕಿಯನ್ನು ತಂದು, ಚಾಕೊಲೇಟ್‌ನ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.
ಆರೋಪಿಯು ಮೂಲತಃ ಉತ್ತರ ಪ್ರದೇಶದವನಾಗಿದ್ದು, ಆರೋಪಿಯ ಪುತ್ರನು ಬೇರೆ ಒಂದು ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದ ಕಾರಣ, ಮಹಪ್ಯೂಸ್ ಮಸೀದಿಯಲ್ಲಿರುವ ಕೊಠಡಿಗೆ ಜಮಾತ್‌ನಿಂದ ಆಶ್ರಯ ಪಡೆದಿದ್ದ. ಈ ಆಶ್ರಯವನ್ನು ದುರುಪಯೋಗ ಮಾಡಿಕೊಂಡು ಹೀನ ಕೃತ್ಯವನ್ನು ಎಸಗಿದ್ದಾನೆ ಎಂಬ ಆರೋಪ ಇದೀಗ ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇರೆಗೆ, ಚಿಕ್ಕಬಳ್ಳಾಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.














