ಮನೆ ಅಂತಾರಾಷ್ಟ್ರೀಯ ಜಪಾನ್​ ನ ಖಾಸಗಿ ಕಂಪನಿ ಕಕ್ಷೆಗೆ ಹಾರಿಬಿಟ್ಟ ಉಪಗ್ರಹ ಕೆಲವೇ ನಿಮಿಷಗಳಲ್ಲಿ ಸ್ಫೋಟ

ಜಪಾನ್​ ನ ಖಾಸಗಿ ಕಂಪನಿ ಕಕ್ಷೆಗೆ ಹಾರಿಬಿಟ್ಟ ಉಪಗ್ರಹ ಕೆಲವೇ ನಿಮಿಷಗಳಲ್ಲಿ ಸ್ಫೋಟ

0

ಓಕಿಯೋ (ಜಪಾನ್​): ಜಪಾನ್​ ನ ಖಾಸಗಿ ಕಂಪನಿಯೊಂದು ಕಕ್ಷೆಗೆ ಹಾರಿಬಿಟ್ಟ ಉಪಗ್ರಹ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡಿದೆ.

ಭಾರೀ ಸದ್ದು, ಬೆಂಕಿಯೊಂದಿಗೆ ಹೊತ್ತಿ ಉರಿದ ರಾಕೆಟ್​ ಅರಣ್ಯ ಪ್ರದೇಶದೊಳಗೆ ಬಿದ್ದಿದೆ. ಈ ಘಟನೆ ಲೈವ್​ ವಿಡಿಯೋದಲ್ಲಿ ಸೆರೆಯಾಗಿದೆ.

ಇಲ್ಲಿನ ಸ್ಟಾರ್ಟ್ ​ಅಪ್​ ಕಂಪನಿಯ ನೇತೃತ್ವದಲ್ಲಿ ಹಾರಿಬಿಟ್ಟ ಕೈರೋಸ್ ಹೆಸರಿನ ಈ ರಾಕೆಟ್​ ಯಶಸ್ವಿಯಾಗಿ ಕಕ್ಷೆ ಸೇರಿದ್ದರೆ, ಜಪಾನ್​ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕಂಪನಿಯಿಂದ ಯಶಸ್ವಿ ಉಡಾವಣೆ ಕಂಡ ಮೊದಲ ರಾಕೆಟ್​ ಎಂಬ ಹಿರಿಮೆಗೆ ಪಾತ್ರವಾಗುತ್ತಿತ್ತು. ಅಲ್ಲದೇ, ರಾಕೆಟ್​ ಹಾರಿಬಿಟ್ಟ ಮೊದಲ ಖಾಸಗಿ ಕಂಪನಿಯಾಗಿ ಈ ಸ್ಟಾರ್ಟ್​ ಅಪ್ ಇತಿಹಾಸ ಪುಟಗಳಲ್ಲಿ ಸೇರುತ್ತಿತ್ತು.

ಟೋಕಿಯೋ ಮೂಲದ ಸ್ಪೇಸ್ ಒನ್ ಎಂಬ ಖಾಸಗಿ ಕಂಪನಿಯನ್ನು 2018 ರಲ್ಲಿ ಕ್ಯಾನನ್ ಎಲೆಕ್ಟ್ರಾನಿಕ್ಸ್, ಐಎಚ್​ಐ, ಶಿಮಿಜು ಮತ್ತು ಪ್ರಮುಖ ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿದೆ. ಸಣ್ಣ ಪ್ರಮಾಣದ ಕೈರೋಸ್​ ಹೆಸರಿನ ರಾಕೆಟ್​ ಅನ್ನು ಬುಧವಾರ ಉಡಾವಣೆ ಮಾಡಿದೆ. ಇದಕ್ಕೂ ಮೊದಲು ಈ ರಾಕೆಟ್​ ಅನ್ನು ಹಲವು ಬಾರಿ ಕಾರಣಾಂತರಗಳಿಂದ ಮುಂದೂಡಲಾಗಿತ್ತು.

ರಾಕೆಟ್​​ ಅನ್ನು ಕಕ್ಷೆಗೆ ಸೇರಿಸುವ ಪ್ರಯತ್ನ ನಡೆಸಿದ ಸ್ಪೇಸ್​ ಒನ್​ ಕಂಪನಿ ಬುಧವಾರ ಅದನ್ನು ಉಡಾವಣೆ ಮಾಡಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಅದು ಹಾರಿದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡು ಬೆಂಕಿ ಕಾರುತ್ತಾ ಮಧ್ಯ ಜಪಾನ್‌ನ ವಕಯಾಮಾ ಪ್ರಿಫೆಕ್ಚರ್‌ ಪ್ರದೇಶದಲ್ಲಿ ಬಿದ್ದಿದೆ.

ರಾಕೆಟ್​ ಬಿದ್ದ ಕೆಲವೇ ಸೆಕೆಂಡ್​ಗಳಲ್ಲಿ ಇಡೀ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೊಗೆ ಆವರಿಸಿಕೊಂಡಿದೆ. ಜೊತೆಗೆ ಬೆಂಕಿಯ ಜ್ವಾಲೆಗಳು ಎದ್ದಿವೆ. ತಕ್ಷಣವೇ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿರುವುದು ಲೈವ್​ ವಿಡಿಯೋದಲ್ಲಿ ಕಾಣಬಹುದು.

ಜಪಾನಿನ ಮಾಧ್ಯಮ ವರದಿಗಳ ಪ್ರಕಾರ, ಈ ಯೋಜನೆಯ ಹಲವು ಬಾರಿ ಮುಂಡೂಡುತ್ತಲೇ ಬಂದಿತ್ತು. ಕಳೆದ ಶನಿವಾರ (ಮಾರ್ಚ್​ 9 ರಂದು) ಉಡಾವಣೆಗೆ ಸಿದ್ಧತೆ ನಡೆಸಿ ಕೊನೆಯಲ್ಲಿ ರದ್ದಾಗಿತ್ತು. ರಾಕೆಟ್​ ಚಲಿಸುವ ಕಕ್ಷೆಯಲ್ಲಿ ಸಮಸ್ಯೆ ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು. ಬಳಿಕ ಬುಧವಾರದಂದು ಉಡಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡು ಲಾಂಚ್​ ಮಾಡಿದಾಗ ರಾಕೆಟ್ ಸ್ಫೋಟಗೊಂಡು ನಾಶವಾಗಿದೆ.

ಉಡಾವಣೆ ವಿಫಲವಾಗಿದ್ದರ ಬಗ್ಗೆ ಸ್ಟಾರ್ಟ್ ಅಪ್ ಸ್ಪೇಸ್ ಒನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ಹೇಳಿವೆ.