ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಮಾರಗೊಂಡನಹಳ್ಳಿ ಬಳಿ ಶಾಲಾ ಮಕ್ಕಳಿದ್ದ ಬಸ್ ಚಾಲಕನನ್ನ ಎಳೆದಾಡಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ನಿನ್ನೆ ಸಂಜೆ 3.45ರ ಸುಮಾರಿಗೆ ಮಕ್ಕಳನ್ನ ಡ್ರಾಪ್ ಮಾಡಿಲು ಶಾಲೆಯಿಂದ ಹೊರಟಿದ್ದ ಶಾಲಾ ಬಸ್ಗೆ ಸ್ಕಾರ್ಪಿಯೊ ಕಾರಿನಿಂದ ಅಡ್ಡಕಟ್ಟಿ ನಾಲ್ಕೈದು ಯುವಕರು ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಟಿರ್ಮಿಶ್ ಶಾಲೆಗೆ ಸೇರಿದ ಶಾಲಾ ಬಸ್ ಮೇಲೆ ಸೋಮವಾರ ಮಧ್ಯಾಹ್ನ ವ್ಯಕ್ತಿಗಳ ಗುಂಪು ದಾಳಿ ಮಾಡಿ ಚಾಲಕ ಜೇಮ್ಸ್ ಧೋನ್ ಎಂಬುವವನ ಮೇಲೆ ಹಲ್ಲೆ ನಡೆಸಲಾಗಿದೆ. ಇನ್ನು ಈ ಘಟನೆಗೆ ಕಾರಣ ಸೈಡ್ ಬಿಡದಿರುವುದು. ಕಿಡಿಗೇಡಿಗಳ ಕಾರಿಗೆ ಸೈಡ್ ಕೊಡದಿದ್ದಕ್ಕೆ ಶಾಲಾ ಬಸ್ ಅಡ್ಡಹಾಕಿ ಅಟ್ಟಹಾಸ ಮೆರೆದಿದ್ದಾರೆ ಎನ್ನಲಾಗಿದೆ.
ಹಲ್ಲೆ ನಡೆಸಿದ್ದೇಕೆ?
ಶಾಲಾ ವಾಹನದ ಹಿಂದೆ ಸ್ಕಾರ್ಪಿಯೋ ಕಾರು ಬರುತ್ತಿತ್ತು. ಈ ವೇಳೆ ದಾರಿ ಬಿಡುವಂತೆ ಕಾರು ಚಾಲಕ ಒಂದೇ ಸಮನೆ ಹಾರ್ನ್ ಮಾಡಿದ್ದ. ಆಗ ಶಾಲಾ ವಾಹನದ ಚಾಲಕ ದಾರಿ ಬಿಡದೆ ಬಸ್ ಚಲಾಯಿಸಿದ್ದಾನೆ. ಇದಕ್ಕೆ ಕೋಪಗೊಂಡ ಕಾರು ಚಾಲಕ ಶಾಲಾ ವಾಹನವನ್ನ ಅಡ್ಡಗಟ್ಟಿ ಚಾಲಕನನ್ನ ಕೆಳಗಿಳಿಸಿ ಹಲ್ಲೆ ನಡೆಸಿದ್ದಾನೆ. ಸ್ಕಾರ್ಪಿಯೋ ಕಾರಿನಲ್ಲಿದ್ದ ನಾಲ್ಕೈದು ಮಂದಿ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಲೋಹದ ವಸ್ತುವನ್ನು ಬಳಸಿ ಬಸ್ ಕಿಟಕಿಯನ್ನು ಒಡೆದು ಬಲವಂತವಾಗಿ ಬಸ್ಸಿನೊಳಗೆ ನುಗ್ಗಲು ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.
ಶಾಲಾ ಬಸ್ನಲ್ಲಿದ್ದ ಮಕ್ಕಳು ಹೆದರಿ ಕಿರುಚಾಡಿಕೊಂಡಿದ್ದಾರೆ. ಸದ್ಯ ಚಾಲಕ ಜೇಮ್ಸ್ ಧೋನ್ ಅವರು ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಅದೃಷ್ಟವಶಾತ್, ಘಟನೆಯಲ್ಲಿ ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ, ಆದರೆ ಹಠಾತ್ ದಾಳಿಯಿಂದ ಮಕ್ಕಳು ಹೆದರಿದ್ದಾರೆ.
112ಕ್ಕೆ ಕರೆ ಮಾಡಲು ಪೊಲೀಸ್ ಆಯುಕ್ತರ ಸಲಹೆ
ಇನ್ನು ಘಟನೆ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರತಿಕ್ರಿಯೆ ನೀಡಿದ್ದು, ರೋಡ್ ರೇಜ್ ಕೇಸ್ಗಳ ಬಗ್ಗೆ ಜನರು ಎಚ್ಚರವಹಿಸಬೇಕು ಎಂದರು. ಎಲ್ಲರೂ ಸಂಚಾರಿ ನಿಯಮಗಳನ್ನ ಫಾಲೋ ಮಾಡಬೇಕು. ಸಣ್ಣ ಪುಟ್ಟ ಮಾತುಕತೆ ಶುರುವಾದ್ರೂ ಎಚ್ಚರವಹಿಸಬೇಕು. ಬೇರೆಯವರಿಗೆ ತೊಂದರೆ ಆಗದಂತೆ ನಡೆದುಕೊಳ್ಳಬೇಕು. ಒಂದು ವೇಳೆ ತೊಂದ್ರೆ ಆದರೆ 112ಕ್ಕೆ ಕರೆ ಮಾಡಬೇಕು. ಇತ್ತೀಚೆಗೆ ಆಗಿರೋ ಪ್ರಕರಣಗಳನ್ನ ಪತ್ತೆ ಮಾಡಲಾಗಿದೆ. ಒಂದಷ್ಟು ಪ್ರಕರಣಗಳಲ್ಲಿ ಆರೋಪಿಗಳನ್ನ ಬಂಧಿಸಿದ್ದೇವೆ ಎಂದು ತಿಳಿಸಿದರು.