ಅದುವರೆಗೆ ಚೆನ್ನಾಗಿ ತನ್ನ ಕೆಲಸ ಕರ್ತವ್ಯಗಳನ್ನು ಮಾಡಿಕೊಂಡು, ಚಡುವಟಿಕೆಯಿಂದ ಬದುಕುತ್ತಿದ್ದ ವ್ಯಕ್ತಿ ದಿಢೀರನೆ ಮಾನಸಿಕ ಕಾಯಿಲೆಗೆ ತುತ್ತಾಗಬಹುದು. ಆತನ ಮಾತು, ವರ್ತನೆ, ಭಾವನೆಗಳು, ಆಲೋಚನಾ ವಿಧಾನ ಬದಲಾಗಬಹುದು. ವ್ಯಕ್ತಿ ಮಂಕಾಗಿ, ನಿಷ್ಕ್ರೀಯವಾಗಿ ಒಂದೆಡೆ ಕೂರಬಹುದು.
ತನ್ನ ಬೇಕು ಬೇಡಗಳನ್ನು ಪೂರ್ಣವಾಗಿ ನಿರ್ಲಕ್ಷಿಸಬಹುದು. ಅಥವಾ ವ್ಯಕ್ತಿ ಉದ್ರಿಕ್ತನಾಗಿ ವಿಪರೀತ ಮಾತಾಡುತ್ತಾ, ಒಂದೆಡೆ ನಿಲ್ಲದೆ, ಚಡಪಡಿಸಬಹುದು. ಕೋಪೋದ್ರೇಕದಿಂದ, ಹಿಂಸಾಚಾರಕ್ಕೆ ಇಳಿಯಬಹುದು. ವಿಪರೀತ ಅನುಮಾನ-ಸಂಶಯಗಳಿಂದ ಎಲ್ಲರನ್ನೂ ಆಕ್ಷೇಪಿಸುತ್ತಾ, “ನೀವೆಲ್ಲ ನನ್ನನ್ನು ಕೊಲ್ಲಲು ಸಂಚು ಮಾಡುತ್ತೀದ್ದಿರಿ, ನನ್ನ ಹಣ ಆಸ್ತಿ-ಪಾಸ್ತಿಯನ್ನು ಲಪಾಟಾಯಿಸುತ್ತಿರುವಿರಿ” ಎನ್ನಬಹುದು. ಪೋಲಿಸರಿಗೆ ದೂರು ಕೊಡಬಹುದು. ಸುತ್ತ-ಮುತ್ತ ಯಾರೂ ಇಲ್ಲದಿದ್ದರೂ, ʼಯಾರೋ ನನ್ನ ಬಗ್ಗೆ ಮಾತಾಡುತ್ತಿದ್ದಾರೆ. ನನ್ನನ್ನು ಬೈಯುತ್ತಿದ್ದಾರೆʼ ಎಂದು ಭ್ರಮೆಪಡಬಹುದು. ತನ್ನ ಕಣ್ಣಿಗೆ ವಿಚಿತ್ರ ಜನ, ದೃಶ್ಯಗಳು ಕಾಣಿಸುತ್ತವೆ ಎನ್ನಬಹುದು. ಮತಿಹೀನನಾಗಿ ತಾನು ಯಾರು, ತಾನೆಲ್ಲಿದ್ದೇನೆ ತನ್ನ ಸುತ್ತ-ಮುತ್ತ ಇರುವವರು ಯಾರು ಎಂದು ಹೇಳಲಾಗದೇ ಗೊಂದಲಕ್ಕೀಡಾಗಬಹುದು. ಗೊತ್ತು ಗುರಿ ಇಲ್ಲದೇ ಅಲೆದಾಡಲು ಪ್ರಾರಂಭಿಸಬಹುದು. ವಿನಾಕಾರಣ ಕೋಪ, ಮತ್ಸರ, ಸಂತೋಷ, ಖುಷಿಯನ್ನು ಅಸಂಬಧ್ಧವಾಗಿ ಪ್ರಕಟಿಸಬಹುದು. ಈ ಕಾಯಿಲೆಯನ್ನು “ಅಕ್ಯೂಟ್ ಸೈಕೋಸಿಸ್” ಎಂದು ಕರೆಯುತ್ತಾರೆ.
ಈ ಕಾಯಿಲೆ ಇದ್ದಕ್ಕಿಂತೆ ಯಾವ ಕಾರಣವಿಲ್ಲದೇ, ಶುರುವಾಗಬಹುದು. ಅಥವಾ ಮನಸ್ಸಿಗೆ ಆಘಾತವಾಗುವಂತಹ ಜೀವನ ಘಟನೆ ಅಥವಾ ದೈಹಿಕ ರೋಗದಿಂದ ಶುರುವಾಗಬಹುದು. ಯಾವುದೇ ತೀವ್ರ ಕಷ್ಟನಷ್ಟ ಅನೀರಿಕ್ಷೀತ ಸೋಲು ನಿರಾಶೆ, ನಿಭಾಯಿಸಲಾಗದ ಜವಾಬ್ಧಾರಿ, ಕರ್ತವ್ಯ, ಮೋಸ, ವಂಚನೆಗೆ ಇಳಗಾಗುವುದು. ಅಗಲಿಕೆ, ಅಪಘಾತ, ದುರಂತವಾಗಿ, ಒಂದು ತಿಂಗಳ ಸೈಕೋಸಿಸ್ ಕಾಣಿಸಿಕೊಳ್ಳುತ್ತದೆ. ರೋಗ ಲಕ್ಷಣಗಳು ಈಜೀವನದ ಘಟನೆ ದುರಂತದ ವಿಚಾರಕ್ಕೆ ಸಂಬಂಧಪಡಬಹುದು. ಉದಾ : ಮಗು ಕಳೆದುಹೋಗಿದೆ. ತಾಯಿಗೆ ಈ ಸೈಕೋಸಿಸ್ ಬಂದಾಗ, ʼನನ್ನ ಮಗುವನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆ. “ನನ್ನ ಮಗುವನ್ನು ಕೊಂದುಬಿಡೋಣ ಡಂದು ಅವರು ಮಾತಾಡಿಕೊಳ್ಳುವುದು ನನಗೆ ಸ್ಪಷ್ಟವಾಗಿ ಕೇಳಿಸುತ್ತಿದೆ.” ಎನ್ನಬಹುದು. ಈ ರೀತಿಯ ಒಂದು ಘಟನೆಯ ನಂತರ ಬರುವ ಅಕ್ಯೂಟ್ ಸೈಕೋಸಿಸ್ ಅನ್ನು “ರಿಯಾಕ್ಟಿವ್ ಸೈಕೋಸಿಸ್” ಎಂದು ಕರೆಯುತ್ತಾರೆ.
ಚಿತ್ತವಿಕಲತೆ ನಿರೋಧಕ ಅಥವಾ ಖಿನ್ನತೆ ನಿರೋಧಕ ಔಷಧಿಗಳು ಕೆಲವು ಪ್ರಕರನಗಳಲ್ಲಿ ವಿದ್ಯುತ್ ಕಂಪನ ಚಿಕಿತ್ಸೆಯೂ ಬೇಕಾಗುತ್ತದೆ. ಆರರಿಂದ ಎಂಟು ವಾರಗಳ ಕಾಲ ಔಷಧಿಯನ್ನು ಸೇವಿಸಿದರೆ ಸಾಕಾಗಬಹುದು. ಔಷಧ ಪ್ರಮಾಣವನ್ನು ಪ್ರತಿರೋಗಿಗೆ ವೈದ್ಯರು ನಿರ್ಧಾರಿಸಿ ಹೇಳುತ್ತಾರೆ.
ಜೀವನದ ಘಟನೆಯ ನಂತರ ಕಾಣಿಸಿಕೊಂಡ ಬರುವ ರಿಯಾಕ್ಟಿವ್ ಸೈಕೋಸಿಸ್ ನಲ್ಲಿ ವ್ಯಕ್ತಿಗೆ ಆ ಘಟನೆ/ಸಮಸ್ಯೆಯನ್ನು ನಿಭಾಯಿಸಲು ಸಲಹೆ-ಸಮಾಧಾನ-ಮನೋಚಿಕಿತ್ಸೆ ನೀಡಬೇಕಾಗುತ್ತದೆ. ಮನೆಯವರು ಮತ್ತು ಸಂಬಂಧ ಪಟ್ಟವರು ವ್ಯಕ್ತಿಗೆ ಅಗತ್ಯವಾದ ಅಗತ್ಯವಾದ ಪ್ರೀತಿ ಅಸರೆ-ಪ್ರೋತ್ಸಾಹಗಳನ್ನು ನೀಡಿದರೆ ಈ ಕಾಯಿಲೆ ಬೇಗ ಮರೆಯಾಗುತ್ತದೆ.
ಅಕ್ಯೂಟ್ ಮತ್ತು ರಿಯಾಕ್ಟಿವ್ ಸೈಕೋಸಿಸ್ ಕಂಡುಬಂದಾಗ ಸಮೀಪದ ಮನೋವೈದ್ಯರನ್ನು ಕಾಣಿ, ಚಿಕಿತ್ಯೆಯಿಂದ ಈ ರೋಗ ಬಹುಬೇಗ ಹತೋಟಿಗೆ ಬರುತ್ತದೆ. ಚಿಕಿತ್ಸೆ ಕೊಡದಿದ್ದರೆ ಶೇಕಡಾ 20ರಷ್ಟು ಪ್ರಕರಣಗಳಲ್ಲಿ ಸೈಕೋಸಿಸ್ ಕಾಯಿಲೆ ಮುಂದುವರೆದು ಸ್ಕಿಜೋಫ್ರಿನಿಯಾ ರೋಗವಾಗಿ ಅಥವಾ ಬೈ ಪೋಲಾರ್ ಅಫೆಕ್ಟಿವ್ ಡಿಸಾರ್ಡರ್ ಆಗಿ ರೋಗಿಯನ್ನು ದೀರ್ಘಾಕಾಲ ಕಾಡಬಹುದು.