ಇಂಫಾಲ್ : ಸತತ 2 ವರ್ಷಗಳಿಗೂ ಮೀರಿ ಹೊತ್ತಿ ಉರಿದಿದ್ದ ಮಣಿಪುರ ಈಗ ಶಾಂತಿ ಹೆಜ್ಜೆಯಿಡುತ್ತಿದೆ. 2 ವರ್ಷಗಳಿಂದ ಮೈತೇಯಿ ಜನರಿಗೆ ನಿರ್ಬಂಧಿಸಿದ್ದ ಹೆದ್ದಾರಿಗಳನ್ನು ತೆರೆಯಲು ಕುಕಿ ಬುಡಕಟ್ಟು ಸಮುದಾಯ ಒಪ್ಪಿಗೆ ನೀಡಿದ ಬಳಿಕ ಈ ಪ್ರದೇಶದಲ್ಲಿ ಶಾಂತಿ ನೆಲೆಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.
2023 ರಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿ ಇದಾಗಿದೆ. ಮಿಜೋರಾಂನ ಐಜ್ವಾಲ್ ನಿಂದ ಮಧ್ಯಾಹ್ನ 12:30ರ ಸುಮಾರಿಗೆ ಚುರಾಚಂದ್ಪುರಕ್ಕೆ ಬಂದಿಳಿಯಲಿದ್ದಾರೆ. ಸಿಎಂ ಹುದ್ದೆಗೆ ಬಿರೇನ್ ಸಿಂಗ್ ರಾಜೀನಾಮೆ ಬಳಿಕ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿರುವ ಮಣಿಪುರಕ್ಕೆ ಇಂದಿನ ಭೇಟಿ ಮಹತ್ವದ್ದಾಗಿದೆ.
ಕುಕಿ ಸಮುದಾಯ ಹಾಗೂ ಮೈತೇಯಿ ಸಮುದಾಯಗಳ ನಡುವೆ ನಡೆದ ಈ ಸುದೀರ್ಘ ಸಂಘರ್ಷದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮನೆಗಳು ಸುಟ್ಟು ಭಸ್ಮವಾಗಿವೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಹೀಗಾಗಿ ಶಾಂತಿಯತ್ತ ಹೆಜ್ಜೆ ಇಡುತ್ತಿರುವ ಮಣಿಪುರದ ಅಭಿವೃದ್ಧಿಗೆ ಪ್ರಧಾನಿ ಮೋದಿ ಆದ್ಯತೆ ನೀಡಿದ್ದಾರೆ.
ಕುಕಿ ಬುಡಕಟ್ಟು ಬಹುಸಂಖ್ಯಾತ ಪ್ರದೇಶವಾದ ಚುರಾಚಂದ್ಪುರದ ಶಾಂತಿ ಮೈದಾನದಲ್ಲಿ 7,300 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಅಡಿಗಲ್ಲು ಹಾಕಲಿದ್ದಾರೆ. ಬಳಿಕ ಮೈತೇಯಿ ಬಹುಸಂಖ್ಯಾತ ಪ್ರದೇಶವಾದ ಇಂಫಾಲ್ನ ಕಾಂಗ್ಲಾದಲ್ಲಿ 1,200 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಒಟ್ಟಾರೆ 8,500 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಮೋದಿ ಇಂದು ಚಾಲನೆ ನೀಡಲಿದ್ದಾರೆ.
ಇದರೊಂದಿಗೆ ಚುರಾಚಂದ್ಪುರ ಮತ್ತು ಇಂಫಾಲ್ನಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲಿದ್ದಾರೆ. ನಂತರ ಎರಡೂ ಸ್ಥಳಗಳಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಸೂಕ್ತ ಭದ್ರತೆ ನಿಯೋಜಿಸಲಾಗಿದೆ.
ಬಳಿಕ ಮೈತೇಯಿ ಹಾಗೂ ಕುಕಿ ಸಮುದಾಯದ ನಡುವೆ ಹಿಂಸಾಚಾರ ನಡೆಯುತ್ತಲೇ ಇತ್ತು. ಅಲ್ಲದೇ ಕೆಲ ಶಸ್ತ್ರಸಜ್ಜಿತ ಗುಂಪುಗಳು ಸಶಸ್ತ್ರಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸುತ್ತಲೇ ಇದ್ದರು. ಈ ಸಂರ್ಭದಲ್ಲಿ ಅಮಾಯಕರೂ ಸಾವನ್ನಪ್ಪಿದ್ದರು. ಕೊನೆಗೆ ಸಂಘರ್ಷ ನಿಯಂತ್ರಿಸಲಾಗದೇ ಕಳೆದ ವರ್ಷ ಬಿರೇನ್ ಸಿಂಗ್ ಮಣಿಪುರ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸುದೀರ್ಘ ಮಾತುಕತೆಯ ಬಳಿಕ ಕೇಂದ್ರ ಸರ್ಕಾರ, ಕುಕಿ ಗುಂಪು ಹಾಗೂ ಮಣಿಪುರ ಸರ್ಕಾರ ಹೊಸ ಒಪ್ಪಂದಕ್ಕೆ ಸಹಿ ಹಾಕಿದವು. ಇದರ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ-2 ಅನ್ನು ಮತ್ತೆ ತೆರೆಲಾಗಿದೆ. ಇದರಿಂದ ಅಗತ್ಯವಸ್ತುಗಳ ಸಾಗಾಟ ಜೊತೆಗೆ ಪ್ರಯಾಣಿಕರ ಸಂಚಾರಕ್ಕೂ ಅನುಕೂಲವಾಗಿದೆ. ಅಲ್ಲದೇ ಕುಕಿ-ಝೋ ಕೌನ್ಸಿಲ್ ಈ ಮಾರ್ಗದಲ್ಲಿ ಶಾಂತಿ ಕಾಪಾಡಿಕೊಳ್ಳಲು ಭದ್ರತಾ ಪಡೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದೆ.















