ಚೆನ್ನೈ, ತಮಿಳುನಾಡು: ನೀಟ್ ನಕಲಿ ಅಂಕಪಟ್ಟಿಯೊಂದಿಗೆ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಮುಂದಾಗಿದ್ದ ವಿದ್ಯಾರ್ಥಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ಮೆದವಕ್ಕಂನ ಲಕ್ಸೈ ಈ ವಂಚನೆ ಎಸಗಲು ಮುಂದಾದ ವಿದ್ಯಾರ್ಥಿ. ಈತ ನೀಟ್ ಪರೀಕ್ಷೆಯಲ್ಲಿ ಕೇವಲ 129 ಅಂಕ ಪಡೆದಿದ್ದರೂ ತಾನೂ 698 ಅಂಕ ಪಡೆದಿದ್ದೇನೆ ಎಂಬ ನಕಲಿ ಅಂಕಪಟ್ಟಿಯನ್ನು ಕಾಲೇಜು ಆಡಳಿತ ಮಂಡಳಿ ಮುಂದಿರಿಸಿದ್ದಾನೆ.
ಸೆಪ್ಟೆಂಬರ್ 29ರಂದು ಪೋಷಕರೊಂದಿಗೆ ಕಾಲೇಜಿಗೆ ಬಂದ ಲಕ್ಸೈ ಶಾಲಾ ಅಡಳಿತ ಮಂಡಳಿ ಮುಂದೆ ನಕಲಿ ಅಂಕಪಟ್ಟಿ ದಾಖಲೆ ನೀಡಿದ್ದಾನೆ. ಈತನ ಅಂಕಗಳನ್ನು ಕಂಡು ಅನುಮಾನಗೊಂಡ ಕಾಲೇಜು ಸಿಬ್ಬಂದಿ ಕಿಲ್ಪಾಕ್‌ನಲ್ಲಿರುವ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಕಚೇರಿಗೆ ಈ ಕುರಿತು ವಿವರಣೆ ಕೋರಿದ್ದಾರೆ. ಬಳಿಕ ವೈದ್ಯಕೀಯ ಶಿಕ್ಷಣ ಉಪ ನಿರ್ದೇಶಕರು ಇದು ನಕಲಿ ದಾಖಲಾತಿ ಎಂದಿದ್ದಾರೆ.
ಅಧಿಕಾರಿಗಳಿಗೆ ತನ್ನ ಅಂಕಪಟ್ಟಿಯ ಬಗ್ಗೆ ಅನುಮಾನವಿದೆ ಎಂಬ ಸುಳಿವಿಲ್ಲದ ಲಕ್ಸೈ ಕಿಲ್ಪಾಕ್ ವೈದ್ಯಕೀಯ ಕಾಲೇಜು ಅಧಿಕಾರಿ ಬಳಿ ಹೋಗಿದ್ದಾರೆ. ಈ ವೇಳೆ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆತನ ನೀಟ್ ಅಂಕಪಟ್ಟಿ ಮತ್ತು ದಾಖಲಾತಿ ಪ್ರಮಾಣಪತ್ರ ಎರಡು ನಕಲಿ ಎಂಬುದು ಸಾಬೀತಾಗಿದೆ. ಈ ಬೆನ್ನಲ್ಲೇ ಕಿಲ್ಫಾಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
2023ರಲ್ಲಿ ಲಕ್ಸೈ ನೀಟ್ನಲ್ಲಿ 127 ಅಂಕ ಗಳಿಸಿದರೆ, 2024ರ ನೀಟ್ನಲ್ಲಿ 129 ಅಂಕ ಕಳಿಸಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆತ ಉತ್ತಮ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾತಿ ಪಡೆಯಬೇಕು ಎಂಬ ಉದ್ದೇಶದಿಂದ ಈ ರೀತಿ ನಕಲಿ ಅಂಕಪಟ್ಟಿ ಸೃಷ್ಟಿಸಿದ್ಧ ಎಂಬುದು ಕಂಡು ಬಂದಿದೆ.
ಈ ರೀತಿಯ ನಕಲಿ ಅಂಕಪಟ್ಟಿ ತಯಾರಿಸಲು ಆತನಿಗೆ ಪಲವಕ್ಕಂನಲ್ಲಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗಿ ಫಾತಿಮಾ ಮತ್ತು ತಿರುವಮಿಯುರ್ ನಲ್ಲಿನ ಆಡ್ಯಾರ್ ಜೆರಾಕ್ಸ್ ಶಾಪ್ ನ ಉದ್ಯೋಗಿ ಸಹಾಯ ಮಾಡಿದ್ದು, ಸದ್ಯ ಇವರಿಬ್ಬರು ನಾಪತ್ತೆಯಾಗಿದ್ದಾರೆ.
ಸದ್ಯ ಲಕ್ಸೈ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳು ಇತರ ವಿದ್ಯಾರ್ಥಿಗಳಿಗೂ ನಕಲಿ ಪ್ರಮಾಣ ಪತ್ರ ಸೃಷ್ಟಿಸುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.