ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ಸಾಯಿನಿಕೇಶ್ ರವಿಚಂದ್ರನ್ ಎಂಬ ವಿದ್ಯಾರ್ಥಿ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‌ನಲ್ಲಿ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿರುವುದು ತಿಳಿದುಬಂದಿದೆ.
ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿ ಪೋಷಕರನ್ನು ವಿಚಾರಿಸಿದ್ದು, ಈ ವೇಳೆ ಸಾಯಿನಿಕೇಶ್ ಭಾರತೀಯ ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದರು ಆದರೆ ಅವರನ್ನು 2 ಬಾರಿ ತಿರಸ್ಕರಿಸಲಾಗಿತ್ತು ಎಂಬ ವಿಚಾರ ತಿಳಿದುಬಂದಿದೆ. 2018 ರಲ್ಲಿ, ಖಾರ್ಕಿವ್‌ನಲ್ಲಿರುವ ನ್ಯಾಷನಲ್ ಏರೋಸ್ಪೇಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಸಾಯಿನಿಕೇಶ್ ಉಕ್ರೇನ್‌ಗೆ ತೆರಳಿದ್ದರು. ಅವರು ಜುಲೈ 2022 ರೊಳಗೆ ಕೋರ್ಸ್ ಅನ್ನು ಪೂರ್ಣಗೊಳಿಸಬೇಕಿತ್ತು.
ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದ, ಅವರ ಕುಟುಂಬವು ಸಾಯಿನಿಕೇಶ್ ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ರಾಯಭಾರ ಕಚೇರಿಯ ಸಹಾಯವನ್ನು ಕೋರಿದ ನಂತರ, ಅವರು ಸಾಯಿಕೇಶ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಿದೆ. ರಷ್ಯಾದ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿರುವುದಾಗಿ ಸಾಯಿನಿಕೇಶ್ ತಮ್ಮ ಕುಟುಂಬಕ್ಕೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಪೋಲೀಸ್ ಅಧಿಕಾರಿಗಳ ಪ್ರಕಾರ, ಸಾಯಿನಿಕೇಶ್ ಪೋಷಕರು ಆತ ಮಿಲಿಟರಿ ಮತ್ತು ಸಶಸ್ತ್ರ ತರಬೇತಿಯ ಬಗ್ಗೆ ಉತ್ಸಾಹವನ್ನು ಹೊಂದಿದ್ದ ಎಂಬ ಅಂಶಗಳನ್ನು ಗುಪ್ತಚರ ದಳಗಳಿಗೆ ತಿಳಿಸಿದ್ದರು ಮತ್ತು ಭಾರತೀಯ ಮಿಲಿಟರಿ ಮತ್ತು ಅಧಿಕಾರಿಗಳ ಛಾಯಾಚಿತ್ರಗಳಿಂದ ತುಂಬಿದ ತನ್ನ ಕೊಠಡಿಯನ್ನು ಕೂಡ ತೋರಿಸಿದ್ದರು. ಅಲ್ಲದೆ ಸಾಯಿನಿಕೇಶ್ ಅಮೆರಿಕ ಸೇನೆಗೆ ಸೇರಲು ಚೆನ್ನೈನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಕೂಡ ವಿಚಾರಿಸಿದ್ದ. ಆದರೆ ಅದು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.
ಆದಾಗ್ಯೂ, ಅವನು ತನ್ನ ಐದು ವರ್ಷಗಳ ಏರೋಸ್ಪೇಸ್ ಎಂಜಿನಿಯರಿಂಗ್ ಕೋರ್ಸ್ ಅನ್ನು ಸಕ್ರಿಯವಾಗಿ ಮುಂದುವರಿಸುತ್ತಿದ್ದ. ಅಲ್ಲದೆ ಅವನು ಉಕ್ರೇನ್ ನಲ್ಲಿ ವಿಡಿಯೋ ಗೇಮ್ ಡೆವಲಪಿಂಗ್ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದ. ಯುದ್ಧ ಪ್ರಾರಂಭವಾಗುವ ಕೆಲವು ದಿನಗಳ ಮೊದಲು ಈ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ವಿದೇಶಾಂಗ ಇಲಾಖೆಯ ಮೂಲಗಳ ಪ್ರಕಾರ 21 ವರ್ಷದ ತಮಿಳುನಾಡು ಯುವಕ ಸಾಯಿನಿಕೇಶ್ ಸ್ವಯಂಸೇವಕರನ್ನು ಒಳಗೊಂಡ ಜಾರ್ಜಿಯನ್ ನ್ಯಾಷನಲ್ ಲೀಜನ್ ಅರೆಸೇನಾ ಘಟಕದಲ್ಲಿ ಉಕ್ರೇನ್ ಪರ ರಷ್ಯಾ ವಿರುದ್ಧ ಹೋರಾಡುತ್ತಿದ್ದಾನೆ ಎನ್ನಲಾಗಿದೆ.