ತ್ರಿಶೂರ್: ಹಾಡಹಗಲೇ ನಗರದ ಮುಖ್ಯ ರಸ್ತೆಯಲ್ಲೇ ಹನ್ನೆರಡು ಮಂದಿಯ ತಂಡವೊಂದು ಚಿನ್ನದ ವ್ಯಾಪಾರಿಗಳಿದ್ದ ಕಾರನ್ನು ಅಡ್ಡಗಟ್ಟಿ ಇಬ್ಬರನ್ನು ಅಪಹರಿಸಿ ಅವರ ಬಳಿಯಿದ್ದ 2.5 ಕೆಜಿ ಚಿನ್ನಾಭರಣ ದೋಚಿದ ಆಘಾತಕಾರಿ ಘಟನೆ ತ್ರಿಶೂರ್ ನ ರಾಷ್ಟ್ರೀಯ ಹೆದ್ದಾರಿಯ ಕುಥಿರಾನ್ ಬಳಿ ಕಳೆದ ಬುಧವಾರ(ಸೆ.೨೫) ರಂದು ನಡೆದಿದೆ.
ಮೂರೂ ಎಸ್‌ಯುವಿ ಕಾರಿನಲ್ಲಿ ಬಂದ ಹನ್ನೆರಡು ಮಂದಿಯ ತಂಡ ಚಿನ್ನದ ವ್ಯಾಪಾರಿಗಳಿದ್ದ ಕಾರನ್ನು ಹೆದ್ದಾರಿ ಮಧ್ಯದಲ್ಲಿ ಅಡ್ಡಗಟ್ಟಿ ಕಾರಿನಲ್ಲಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿ ಅವರನ್ನು ಅಪಹರಿಸಿ ಬಳಿಕ ಅವರ ಬಳಿಯಿದ್ದ ಕೋಟ್ಯಾಂತರ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ದರೋಡೆ ನಡೆಸುವ ದೃಶ್ಯ ಅಲ್ಲಿದ್ದ ಕಾರಿನ ಡ್ಯಾಶ್ ಬೋರ್ಡ್ ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಏನಿದು ಪ್ರಕರಣ:
ತ್ರಿಶೂರ್‌ನ ಕಿಜಕ್ಕೆಕೋಟಾದ ಚಿನ್ನದ ವ್ಯಾಪಾರಿ ಅರುಣ್ ಸನ್ನಿ ಮತ್ತು ಅವರ ಸ್ನೇಹಿತ ಪೊಟ್ಟಾ ನಿವಾಸಿ ರೋಜಿ ಥಾಮಸ್ ಇಬ್ಬರು ಚಿನ್ನದ ವ್ಯಾಪಾರಿಗಳು ಬುಧವಾರ ಬೆಳಗ್ಗೆ 11.15ಕ್ಕೆ ತಮ್ಮ ಕಾರಿನಲ್ಲಿ ಸುಮಾರು 2.5ಕೆಜಿ ಚಿನ್ನವನ್ನು ಕೊಯಮತ್ತೂರಿನಿಂದ ತ್ರಿಶೂರ್‌ಗೆ ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದರು ಎನ್ನಲಾಗಿದೆ. ಕಾರು ಕುಥಿರಾನ್ ಹೆದ್ದಾರಿಯಲ್ಲಿ ಬರುತ್ತಿದ್ದಂತೆ ಎರಡು ಇನ್ನೋವಾ ಹಾಗೂ ಒಂದು ರೆನಾಲ್ಟ್ ಕಾರಿನಲ್ಲಿ ಬಂದ ಹನ್ನೆರಡು ಮಂಜು ಮುಸುಧಾರಿಗಳ ತಂಡ ಕಾರನ್ನು ಅಡ್ಡಗಟ್ಟಿ ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿ ಅವರ ಕಾರಿನಲ್ಲಿದ್ದ ಚಿನ್ನದ ಬ್ಯಾಗ್ ಎಗರಿಸಿ ಬಳಿಕ ಇಬ್ಬರನ್ನೂ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಘಟನೆಯ ದೃಶ್ಯ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ನಡೆದ ಕೆಲ ಹೊತ್ತಿನಲ್ಲೇ ಅಪಹರಣಕ್ಕೊಳಗಾದ ಇಬ್ಬರನ್ನು ತಂಡ ಕಾರಿನಿಂದ ಇಳಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಪೀಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮೆರಾ ಆಧಾರದ ಮೇಲೆ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.