ಮನೆ ರಾಜ್ಯ ಬಂಡೀಪುರ ಭಾಗದಲ್ಲಿ ಮಹಿಳೆಯನ್ನು ಬಲಿ ಪಡೆದಿದ್ದ ಹುಲಿ ಸೆರೆ

ಬಂಡೀಪುರ ಭಾಗದಲ್ಲಿ ಮಹಿಳೆಯನ್ನು ಬಲಿ ಪಡೆದಿದ್ದ ಹುಲಿ ಸೆರೆ

0

ಮೈಸೂರು: ಬಂಡೀಪುರ ಭಾಗದಲ್ಲಿ ಮಹಿಳೆಯನ್ನು ಬಲಿ ಪಡೆದಿದ್ದ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚುಮದ್ದು ನೀಡಿ ಯಶಸ್ವಿಯಾಗಿ ಹುಲಿಯನ್ನು ಸೆರೆ ಹಿಡಿದಿದ್ದಾರೆ.

ಸೋಮವಾರ ಮಧ್ಯರಾತ್ರಿ 1.45ರ ಹೊತ್ತಿಗೆ ಎರಡು ದಿನದ ಹಿಂದೆ ಹಸುವೊಂದನ್ನು ಕೊಂದಿದ್ದ ಜಾಗಕ್ಕೆ ಬಂದ ಹುಲಿಯನ್ನು ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ. 10 ವರ್ಷದ ಗಂಡು ಹುಲಿ ಇದಾಗಿದ್ದು, ಸದ್ಯ ಮೈಸೂರು ಮೃಗಾಲಯದಲ್ಲಿ ಬಿಡಲಾಗಿದೆ.

ನ.24ರಂದು ಹೆಡಿಯಾಲ ವಲಯ ಅರಣ್ಯ ವ್ಯಾಪ್ತಿಯಲ್ಲಿ ಬಳ್ಳೂರು ಹುಂಡಿ ಬಳಿ ದನ ಮೇಯಿಸಲು ಹೋಗಿದ್ದ ರತ್ನಮ್ಮ (55) ಎಂಬ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ ಆಕೆಯನ್ನು ಕೊಂದು ಹಾಕಿತ್ತು. ಅಲ್ಲದೇ ದೇಹದ ಭಾಗವನ್ನೂ ತಿಂದು ಹಾಕಿತ್ತು. ಮರು ದಿನ ಅದೇ ಗ್ರಾಮದ ಹಸುವೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ನಂತರ ಜನರಲ್ಲಿ ಆತಂಕ ಹೆಚ್ಚಾಗಿ ಅರಣ್ಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಸದ್ಯ ಮೂರು ದಿನಗಳ ಸತತ ಕಾರ್ಯಾಚರಣೆಯಿಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ.

ಇನ್ನು ಹುಲಿ ಒಮ್ಮೆ ಬೇಟೆಯಾಡಿದ ಸ್ಥಳಕ್ಕೆ ಮತ್ತೊಮ್ಮೆ ಬೇಟೆಗಾಗಿ ಬಂದೇ ಬರುತ್ತದೆ ಎಂಬ ಕಾರಣದಿಂದ ಹುಲಿ ದಾಳಿ ಮಾಡಿದ ಸ್ಥಳದಲ್ಲಿ ಕ್ಯಾಮರಗಳನ್ನು ಅಳವಡಿಸಲಾಗಿತ್ತು. ಸೋಮವಾರ ರಾತ್ರಿ 9ರ ಸಮಯದಲ್ಲಿಯೇ ಹುಲಿ ಹಸು ತಿನ್ನಲು ಬಂದಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಮೀಪದಲ್ಲಿಯೇ ಬೋನು ಇರಿಸಿ ಅದರೊಳಗೆ ವೈದ್ಯಾಧಿಕಾರಿ ಡಾ.ವಾಸೀಂ ಜಾಫರ್‌ ಅವರು ಇರುವಂತೆ ನೋಡಿಕೊಂಡಿತ್ತು. ಅಲ್ಲದೇ ಸಿಬ್ಬಂದಿಯೂ ಅಲ್ಲಿಯೇ ಇದ್ದರು. ಮಧ್ಯರಾತ್ರಿ ಮತ್ತೆ ಹುಲಿ ಬಂದಾಗ ಅದಕ್ಕೆ ಅರವಳಿಕೆಯನ್ನು ಡಾ.ವಾಸೀಂ ಜಾಫರ್‌ ಅವರು ನೀಡುವಲ್ಲಿ ಯಶಸ್ವಿಯಾದರು. ಕೆಲವೇ ಕ್ಷಣದಲ್ಲಿ ಉರುಳಿ ಬಿದ್ದ ಹುಲಿಯನ್ನು ಬಲೆ ಹಾಕಿ ಸೆರೆ ಹಿಡಿದು ಬೆಳಗಿನ ಜಾವವೇ ಮೈಸೂರು ಮೃಗಾಲಯಕ್ಕೆ ಶಿಫ್ಟ್ ಮಾಡಲಾಯಿತು .

ಅಧಿಕಾರಿಗಳು ಸೇರಿ 207 ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ. 100 ಗಿರಿಜನರು ಹುಲಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಹಿಂದಿನ ಲೇಖನಮಂಗಳೂರು: ಅನೈತಿಕ ಪೊಲೀಸ್ ಗಿರಿ ನಡೆಸಿದ ಇಬ್ಬರ ಬಂಧನ
ಮುಂದಿನ ಲೇಖನಸಾರ್ವಜನಿಕ ಸೇವಾ ವಾಹನಗಳಿಗೆ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ