ಮನೆ ಕಾನೂನು ರಾಜ್ಯದ ನ್ಯಾಯಾಲಯಗಳಲ್ಲಿ ಒಟ್ಟು 109 ಸರ್ಕಾರಿ ಅಭಿಯೋಜಕರ ಹುದ್ದೆಗಳು ಖಾಲಿ: ಗೃಹ ಸಚಿವ ಜಿ ಪರಮೇಶ್ವರ್

ರಾಜ್ಯದ ನ್ಯಾಯಾಲಯಗಳಲ್ಲಿ ಒಟ್ಟು 109 ಸರ್ಕಾರಿ ಅಭಿಯೋಜಕರ ಹುದ್ದೆಗಳು ಖಾಲಿ: ಗೃಹ ಸಚಿವ ಜಿ ಪರಮೇಶ್ವರ್

0

ಕರ್ನಾಟಕದ ನ್ಯಾಯಾಲಯಗಳಲ್ಲಿ ಪ್ರಸ್ತುತ ಎ  ಹಾಗೂ ಬಿ ವೃಂದಗಳಲ್ಲಿ ಒಟ್ಟು 109 ಸರ್ಕಾರಿ ಅಭಿಯೋಜಕರು,  ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್‌ ತಿಳಿಸಿದ್ದಾರೆ.

Join Our Whatsapp Group

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶಿವಾಜಿನಗರದ ಶಾಸಕ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು ಎ ವೃಂದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರ 13 ಹುದ್ದೆಗಳು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ 25 ಹುದ್ದೆಗಳು ಹಾಗೂ ಬಿ ವೃಂದದ ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಸರ್ಕಾರಿ ವಕೀಲರ 71 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದ್ದಾರೆ.

ಎ ವೃಂದದ ಹುದ್ದೆಗಳಾದ ಸರ್ಕಾರಿ ಅಭಿಯೋಜಕರು ಹಾಗೂ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗಳು ಮುಂಬಡ್ತಿ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳಾಗಿದ್ದು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅರ್ಹ ಅಧಿಕಾರಿಗಳು ಲಭ್ಯವಿಲ್ಲದ ಕಾರಣ ಖಾಲಿ ಇವೆ. ಪ್ರಸ್ತುತ ಈ ಹುದ್ದೆಗಳನ್ನು ಪ್ರಭಾರದಲ್ಲಿರಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಖಾಲಿ ಇರುವ ಬಿ ವೃಂದದ ಸಹಾಯಕ ಅಭಿಯೋಜಕರ ಹುದ್ದೆಗಳು ನೇರ ನೇಮಕಾತಿ ಮಾಡಿಕೊಳ್ಳಬೇಕಾದ ಹುದ್ದೆಗಳಾಗಿದ್ದು ಮುಂದಿನ ನೇಮಕಾತಿ ವೇಳೆ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಕ್ರಿಮಿನಲ್‌ ಮೊಕದ್ದಮೆ ಕುರಿತಂತೆ ರಿಜ್ವಾನ್‌ ಅವರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಗೃಹ ಸಚಿವರು 2022ರಲ್ಲಿ 74962 ಪ್ರಕರಣಗಳು 2023ರಲ್ಲಿ 94368 ಪ್ರಕರಣಗಳು ಹಾಗೂ 2024ರ ನವೆಂಬರ್‌ 30ರವರೆಗೆ 66538 ಪ್ರಕರಣಗಳು ಬಾಕಿ ಉಳಿದಿವೆ ಎಂದು ತಿಳಿಸಿದ್ದಾರೆ.

ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ವಿಲೇವಾರಿಗೆ ಯಾವುದಾದರೂ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ “ಪೊಕ್ಸೊ ಪ್ರಕರಣಗಳ ವಿಚಾರಣೆಗಾಗಿ ರೂಪುಗೊಂಡಿರುವ 31 ಪೊಕ್ಸೊ ನ್ಯಾಯಾಲಯಗಳಿಗೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಸರ್ಕಾರಿ ಅಭಿಯೋಜಕರು ಇಲ್ಲವೇ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸುವ ಪ್ರಸ್ತಾವನೆ ಪರಿಶೀಲನಾ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.