ಚಿತ್ರದುರ್ಗ: ತಮ್ಮ ನಾಲ್ಕು ವರ್ಷದ ಮಗುವಿನ ಶವದೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸ್ಟಾರ್ಟ್ ಅಪ್ ಕಂಪನಿಯ ಮಹಿಳಾ ಸಿಇಒರನ್ನು ಬಂಧಿಸಲಾಗಿದೆ.
ಸ್ಟಾರ್ಟ್ ಅಪ್ ಫೌಂಡರ್ ಹಾಗೂ ಸಿಇಒ ಸುಚನಾ ಸೇಠ್ ಬಂಧಿತ ಮಹಿಳೆ.
ಗೋವಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಿಇಒ ಅವರನ್ನು ಐಮಂಗಲ ಪೊಲೀಸ್ ಠಾಣೆ ಬಳಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ
ಬೆಂಗಳೂರಿನಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಸುಚನಾ ಸೇಠ್ ಕಳೆದ ಶನಿವಾರ ತಮ್ಮ ನಾಲ್ಕು ವರ್ಷದ ಮಗನನ್ನು ಗೋವಾದ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದರು. ಸೋಮವಾರ ಬೆಳಗ್ಗೆ ಅಲ್ಲಿನ ರೂಂ ಖಾಲಿ ಮಾಡಿ ಟ್ಯಾಕ್ಸಿಯಲ್ಲಿ ಕರ್ನಾಟಕಕ್ಕೆ ಹೊರಟಿದ್ದರು. ಕೊಠಡಿಯನ್ನು ಸ್ವಚ್ಛಗೊಳಿಸಲು ಹೋದ ಸಿಬ್ಬಂದಿಗೆ ಅಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಅನುಮಾನಗೊಂಡಿದ್ದಾರೆ.
ಸಿಬ್ಬಂದಿ ಹೋಟೆಲ್ ಮ್ಯಾನೇಜ್ ಮೆಂಟ್ ಗೆ ಮಾಹಿತಿ ನೀಡಿದ್ದು, ಹೋಟೆಲ್ ಆಡಳಿತ ಮಂಡಳಿ ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಸುಚನಾ ಸೇಠ್ ಹೋಟೆಲ್ಗೆ ಆಗಮಿಸಿದಾಗ ಮಗನೂ ಜೊತೆಗಿದ್ದು, ಹೋಟೆಲ್ ನಿಂದ ಹೊರಡುವಾಗ ಒಬ್ಬರೇ ಕಂಡಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ತಕ್ಷಣ ಸುಚನಾ ಸೇಠ್ ಪ್ರಯಾಣಿಸುತ್ತಿದ್ದ ಟ್ಯಾಕ್ಸಿ ಡ್ರೈವರ್ ಗೆ ಕರೆ ಮಾಡಿ, ಸುಚನಾ ಸೇಠ್ ಜೊತೆ ಮಾತನಾಡಿದ್ದಾರೆ. ಆದರೆ ಸುಚನಾ ತಮ್ಮ ಮಗನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿದ್ದಾರೆ. ವಿಳಾಸ ನೀಡುವಂತೆ ಪೊಲೀಸರು ಹೇಳಿದ್ದು, ಸುಚನಾ ನೀಡಿದ ಸಂಬಂಧಿಕರ ವಿಳಾಸವನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆ ವಿಳಾಸ ನಕಲಿ ಎನ್ನುವುದು ಪತ್ತೆಯಾದಾಗ ಪೊಲೀಸರ ಅನುಮಾನ ಇನ್ನಷ್ಟು ಬಲವಾಗಿದೆ.
ಕೂಡಲೇ ಗೋವಾ ಪೊಲೀಸರು ಈ ಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಅದೇ ಸಮಯಕ್ಕೆ ಟ್ಯಾಕ್ಸಿ ಚಾಲಕನನ್ನೂ ಸಂಪರ್ಕಿಸಲಾಯಿತು. ಸುಚನಾ ಸೇಠ್ ಗೆ ಅನುಮಾನ ಬಾರದಂತೆ ಹತ್ತಿರದಲ್ಲಿ ಪೊಲೀಸ್ ಠಾಣೆ ಕಂಡಲ್ಲಿ ಅಲ್ಲಿಗೆ ಕರೆದುಕೊಂಡು ಹೋಗುವಂತೆ ಟ್ಯಾಕ್ಸಿ ಚಾಲಕನಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಅದರಂತೆ ಟ್ಯಾಕ್ಸಿ ಚಾಲಕ ಗೋವಾದಿಂದ ಬೆಂಗಳೂರಿಗೆ ಹೋಗುವ ಹೈವೇ 4ರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾನೆ. ಆಕೆಯನ್ನು ಬಂಧಿಸಿದ ಐಮಂಗಲ ಠಾಣಾ ಪೊಲೀಸರು, ಕಾರಿನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್ ಅನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸೂಟ್ ಕೇಸ್ ನಲ್ಲಿ ಮಗುವಿನ ಶವ ಪತ್ತೆಯಾಗಿದೆ.
ಗೋವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಚನಾ ಸೇಠ್ ಅವರನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.