ಬೆಂಗಳೂರು: ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮಹಿಳೆಯೊಬ್ಬರು ಟ್ರ್ಯಾಕ್ ಮೇಲೆ ಜಿಗಿದ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ಪರಿಣಾಮ ಪರ್ಪಲ್ ಲೈನ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತವಾಗಿತ್ತು.
ಸೋಮವಾರ ಸಂಜೆ ಇಂದಿರಾನಗರ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ 1ರಲ್ಲಿ ರೈಲಿಗಾಗಿ ಕಾದು ನಿಂತಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ತನ್ನ ಮೊಬೈಲ್ ಅನ್ನು ರೈಲು ಹಳಿಗಳ ಮೇಲೆ ಬೀಳಿಸಿದ್ದಾರೆ. ಅದನ್ನು ಹಿಂಪಡೆಯಲು ಆಕೆ ಸಹಜವಾಗಿಯೇ ವಿದ್ಯುದ್ದೀಕರಿಸಿದ ಟ್ರ್ಯಾಕ್‌ಗಳ ಮೇಲೆ ಜಿಗಿದಿದ್ದಾಳೆ. ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದು, ಕೂಡಲೇ ಆಕೆಯನ್ನು ಮೇಲೆಕೆ ಎಳೆದುಕೊಂಡಿದ್ದಾರೆ.
ಪರಿಣಾಮ ಪೀಕ್ ಅವರ್ ನಲ್ಲಿ 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಳ್ಳಲು ಕಾರಣವಾಯಿತು. ಇದು ಪರ್ಪಲ್ ಲೈನ್‌ನಲ್ಲಿ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರ ಮೇಲೆ ಪರಿಣಾಮ ಬೀರಿತು.
ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎ ಎಸ್ ಶಂಕರ್, “ಇಂದಿರಾನಗರ ಮೆಟ್ರೋ ಸ್ಟೇಷನ್ ಪ್ಲಾಟ್‌ಫಾರ್ಮ್ 1 ರಲ್ಲಿ ಬೈಯಪ್ಪನಹಳ್ಳಿ ಕಡೆಗೆ ಹೋಗುತ್ತಿದ್ದ ಮಹಿಳೆಯೊಬ್ಬರು ಸಂಜೆ 6.40 ರ ಸುಮಾರಿಗೆ ತಮ್ಮ ಫೋನ್ ಅನ್ನು ಹಳಿ ಮೇಲೆ ಕೈ ತಪ್ಪಿ ಬೀಳಿಸಿಕೊಂಡಿದ್ದಾರೆ. ರೈಲು ಬರುವ ಮೊದಲು ಅದನ್ನು ತೆಗೆದುಕೊಳ್ಳಲು ನಿರ್ಧರಿಸಿ ಟ್ರಾಕ್ ಮೇಲೆ ಹಾರಿದ್ದಾರೆ. ಆದರೆ ಹಿಂತಿರುಗಲು ಮೇಲೆ ಬರಲು ಸಾಧ್ಯವಾಗಲಿಲ್ಲ, ಮತ್ತು ಇತರ ಪ್ರಯಾಣಿಕರು ಅವಳನ್ನು ಪ್ಲಾಟ್‌ಫಾರ್ಮ್‌ಗೆ ಹಿಂತಿರುಗಲು ಸಹಾಯ ಮಾಡಬೇಕಾಯಿತು. ಪ್ಲಾಟ್‌ಫಾರ್ಮ್‌ನಲ್ಲಿರುವ ಮೆಟ್ರೋ ಅಧಿಕಾರಿಯೊಬ್ಬರು ತುರ್ತು ಟ್ರಿಪ್ ವ್ಯವಸ್ಥೆಯನ್ನು ಒತ್ತಿ ಟ್ರ್ಯಾಕ್‌ಗಳಿಗೆ ಸರಬರಾಜಾಗುತ್ತಿದ್ದ ವಿದ್ಯುತ್ ಸ್ಥಗಿತಗೊಳಿಸಿದರು ಎಂದು ಹೇಳಿದರು.
ಇಂದಿರಾನಗರ ಠಾಣೆಯಲ್ಲಿ ಉಂಟಾದ ಗಲಾಟೆಯಲ್ಲಿ ಮಹಿಳೆ ಜಾರಿಕೊಳ್ಳುವಲ್ಲಿ ಯಶಸ್ವಿಯಾದರು. “ನಮ್ಮ ಸಿಸಿಟಿವಿ ಅವಳ ಮುಖ ಮತ್ತು ಕ್ರಿಯೆಯನ್ನು ಸೆರೆಹಿಡಿದಿದೆ. ಭವಿಷ್ಯದಲ್ಲಿ ನಮ್ಮ ಯಾವುದೇ ನಿಲ್ದಾಣಕ್ಕೆ ಬಂದರೂ ಆಕೆ ಸಿಕ್ಕಿಬೀಳುತ್ತಾಳೆ” ಎಂದು ಶಂಕರ್ ಹೇಳಿದರು.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಈ ಬಗ್ಗೆ ಮಾತನಾಡಿದ್ದು, “ಇದೊಂದು ವಿಚಿತ್ರ ಘಟನೆ. 750 ವೋಲ್ಟ್ ವಿದ್ಯುತ್ ಹರಿಯುವ ಹಳಿಗಳಲ್ಲಿ ಮೆಟ್ರೋ ರೈಲು ಸಂಚರಿಸುತ್ತದೆ. ಮಹಿಳೆ ಕೆಳಗೆ ಜಿಗಿಯುವುದನ್ನು ಗಮನಿಸಿದ ನಮ್ಮ ಸಿಬ್ಬಂದಿಯ ಸಮಯ ಪ್ರಜ್ಞೆ ಮೆರೆದು ವಿದ್ಯುತ್ ಸರಬರಾಜು ಕಡಿತಗೊಳಿಸಿದ್ದಾರೆ. ಅವರ ಚುರುಕಾದ ಕ್ರಮವೇ ಆಕೆಯ ಜೀವ ಉಳಿಸಿದೆ. ಇದು ಅತ್ಯಂತ ಅಪಾಯಕಾರಿಯಾದ ಕಾರಣ ಟ್ರ್ಯಾಕ್‌ಗಳ ಬಳಿ ಎಲ್ಲೂ ಯಾರನ್ನೂ ಅನುಮತಿಸಲಾಗುವುದಿಲ್ಲ ಎಂದು ಹೇಳಿದರು.